- ದಲಿತರಿಗೆ ಪ್ರೊ. ಎ.ಬಿ.ರಾಮಚಂದ್ರಪ್ಪ ಎಚ್ಚರಿಕೆ । ಮಹಾಡ್ ಸತ್ಯಾಗ್ರಹದ ಸ್ಮರಣಾರ್ಥ ಶೋಷಿತರ ಸಂಘರ್ಷ ದಿನಾಚರಣೆ
ದಲಿತರ ಮೊದಲ ಚಳವಳಿಯಾದ ಮಹಾಡ್ ಚಳವಳಿ ಘಟಿಸಿ ಶತಮಾನದ ಹೊಸ್ತಿಲಲ್ಲಿದ್ದರೂ ಇಂದಿಗೂ ದಲಿತರ ಹೋರಾಟ ನಿಂತಿಲ್ಲ. ಅಕ್ಷರಕ್ಕೆ ತೆರೆದುಕೊಳ್ಳದೇ, ಆಮಿಷಕ್ಕೊಳಗಾಗಿ ನಮ್ಮನ್ನು ನಾವು ಪ್ರಭುತ್ವಕ್ಕೆ ಮಾರಿಕೊಳ್ಳುತ್ತಿರುವುದೇ ಇದಕ್ಕೆಲ್ಲಾ ಕಾರಣ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯಾಧ್ಯಕ್ಷ ಪ್ರೊ. ಎ.ಬಿ. ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ನಗರದ ರೋಟರಿ ಬಾಲಭವನದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಭಾರತದ ಅಸ್ಪೃಶ್ಯರ ಮೊದಲ ಪ್ರತಿರೋಧ ಚಳವಳಿ ಮಹಾಡ್ ಸತ್ಯಾಗ್ರಹದ ನೆನಪಿನ ಶೋಷಿತರ ಸಂಘರ್ಷದ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. 1927ರ ಮಹಾಡ್ ಚಳವಳಿ ದಲಿತರ ಮೊದಲ ಚಳವಳಿಯಾಗಿದೆ ಎಂದರು.ಸಂಘಟನೆ ಎನ್ನುವುದು ನಮ್ಮಲ್ಲಿ ಅರಿವನ್ನು ವಿಸ್ತರಿಸಲು ಬೇಕು. ಆದರೆ, ಈಚಿನ ದಿನಗಳಲ್ಲಿ ಸಂಘಟನೆ ಎನ್ನುವುದು ವೈಯಕ್ತಿಕ ಸ್ವಾರ್ಥಕ್ಕಾಗಿ ಕಟ್ಟಲಾಗುತ್ತಿದೆ. ಸಂಘಟನೆಗಳು ಸಾಂಘಿಕವಾಗಿ ಹೋರಾಡದಿದ್ದರೆ ನಮ್ಮ ಮೇಲೆ ನಿರಂತರ ಶೋಷಣೆ ನಡೆಯುತ್ತಲೇ ಇರುತ್ತವೆ. ಇದೇ ಸ್ಥಿತಿ ಮುಂದುವರಿದರೆ ಭಾರತದ ವಸ್ತುಸ್ಥಿತಿ ಅರಿವಾಗುವುದಿಲ್ಲ ಎಂದು ತಿಳಿಸಿದರು.
ಹಿಂದಿನಿಂದಲೂ ಸ್ಪೃಶ್ಯರು ಶೋಷಣೆಗಾಗಿ ಶಿಕ್ಷಣವನ್ನೇ ಆಯುಧವಾಗಿ ಮಾಡಿಕೊಂಡು, ದಲಿತರ ವಿದ್ಯೆ, ಅವಕಾಶವನ್ನೇ ಕಸಿದರು. ಶಿಕ್ಷಣ ಪಡೆಯಲು ಎಲ್ಲರಿಗೂ ಇಂದು ಅವಕಾಶ ಇದ್ದದೆ. ಆದರೆ, ಪ್ರಭುತ್ವವು ಬೇರೆ ಬೇರೆ ರೀತಿಯಲ್ಲಿ ವಂಚಿಸುತ್ತಿದೆ. ಧರ್ಮ, ದೇವರು, ಸಂಸ್ಕೃತಿ ಹೆಸರಿನಲ್ಲಿ ಸಾವಿರಾರು ವರ್ಷ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಲೈಂಗಿಕವಾಗಿ ಶೋಷಣೆ ಮಾಡಲಾಗಿದೆ. ಇಂದಿಗೂ ನಮ್ಮ ಯುವಕರಿಗ ಇದೆಲ್ಲಾ ಗೊತ್ತಾಗುತ್ತಿಲ್ಲ. ಒಂದು ಬಾಟಲಿ, ಒಂದು ಬಿರಿಯಾನಿಗಾಗಿ ಮಾರಾಟವಾಗುತ್ತಿದ್ದು, ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಪ್ರೊ. ಎ.ಬಿ. ರಾಮಚಂದ್ರಪ್ಪ ತಾಕೀತು ಮಾಡಿದರು.
ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಡಿಎಸ್‌ಎಸ್ ಸಂಸ್ಥಾಪಕ ಪ್ರೊ. ಬಿ.ಕೃಷ್ಣಪ್ಪ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
(ಬಾಕ್ಸ್) * ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ: ನಾಗರಾಜ
ದಾವಣಗೆರೆಯಲ್ಲಿ ಮಂಗಳವಾರ ಡಿಎಸ್‌ಎಸ್ ಹಮ್ಮಿಕೊಂಡಿದ್ದ ಸಮಾರಂಭವನ್ನು ಗಣ್ಯರು ಡಾ.ಅಂಬೇಡ್ಕರ್, ಪ್ರೊ. ಬಿ.ಕೃಷ್ಣಪ್ಪ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.