ಗರ್ಭಕೋಶ ಕ್ಯಾನ್ಸರ್ ತಡೆಗಟ್ಟಲು ಚುಚ್ಚು ಮದ್ದು: ಡಾ.ಎಚ್.ಅರ್ಜುನ್ ಕುಮಾರ್

KannadaprabhaNewsNetwork | Published : Mar 29, 2025 12:37 AM

ಸಾರಾಂಶ

ಮಹಿಳೆಯರು ಸ್ತ್ರೀರೋಗಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸುವ ಜತೆಗೆ ವೈದ್ಯರ ಜತೆ ಸಂಕುಚಿತ ಭಾವನೆ ತೊರೆದು ಮುಕ್ತವಾಗಿ ಹೇಳುವ ಮೂಲಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸಬೇಕು. ಪ್ರಸ್ತುತ ದಿನಗಳಲ್ಲಿ ರಾಸಾಯನ ಮಿಶ್ರಿತ ಆಹಾರ ಸೇವಿಸುವ ಮೂಲಕ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಗರ್ಭಕೋಶದ ಕ್ಯಾನ್ಸ್‌ರ್ ತಡೆಗಟ್ಟಲು ಚುಚ್ಚು ಮದ್ದು ಬಂದಿದೆ. ಮಹಿಳೆಯರು ಭಯ ಪಡುವ ಅಗತ್ಯವಿಲ್ಲ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿ ಕಾರಿ ಡಾ.ಎಚ್.ಅರ್ಜುನ್‌ಕುಮಾರ್ ತಿಳಿಸಿದರು.

ಸಮೀಪದ ಅಣ್ಣೂರು ಗ್ರಾಪಂನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣುಮಕ್ಕಳಿಗೆ ಕ್ಯಾನ್ಸ್‌ರ್ ತಡೆಗಟ್ಟಲು 9 ವರ್ಷದಿಂದಲೇ ಚುಚ್ಚುಮದ್ದು ಹಾಕಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದರು.

ಮಹಿಳೆಯರು ಸ್ತ್ರೀರೋಗಕ್ಕೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಎಚ್ಚರ ವಹಿಸುವ ಜತೆಗೆ ವೈದ್ಯರ ಜತೆ ಸಂಕುಚಿತ ಭಾವನೆ ತೊರೆದು ಮುಕ್ತವಾಗಿ ಹೇಳುವ ಮೂಲಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಂತ ಜೀವನ ನಡೆಸುವಂತೆ ಸಲಹೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ರಾಸಾಯನ ಮಿಶ್ರಿತ ಆಹಾರ ಸೇವಿಸುವ ಮೂಲಕ ಆರೋಗ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಗಟ್ಟಲು ಸಾವಯುವ ಬೇಸಾಯದ ಆಹಾರ ಪದ್ಧಯಿಂದ ಬೆಳೆದ ಬೆಳೆಗಳ ಆಹಾರ ಸೇವಿಸುವಂತೆ ಸಲಹೆ ನೀಡಿದರು.

ವಕೀಲರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಜಿ.ಎನ್.ಸತ್ಯ ಮಾತನಾಡಿ, ಲಿಂಗ ಅಸಮಾನತೆ, ಮಹಿಳಾ ಸಹಾಯವಾಣಿ, ಕೌಟುಂಬಿಕ ದೌರ್ಜನ್ಯ, ಆಸ್ತಿ ಹಕ್ಕು, ಮಹಿಳೆಯರ ನೆರವಿಗಿರುವ ಕಾನೂನುಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿ ಮಹಿಳೆಯರ ರಕ್ಷಣೆಗೆ ಹಲವಾರು ಕಾನೂನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕ್ಯಾತಘಟ್ಟ ಗ್ರಾಪಂ ಮಾಜಿ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಅಣ್ಣೂರು ಗ್ರಾಪಂ ಸದಾ ಚಟುವಟಿಕೆಗಳಿಂದ ಕೂಡಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನತೆಗೆ ಉಪಯೋಗವಾಗುವಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆಡಳಿತಕ್ಕೆ ಹಿಡಿತ ಕೈಗನ್ನಡಿಯಾಗಿದೆ ಎಂದರು.

ವಿಮೋಚನಾ ಮಹಿಳಾ ಸಂಘಟನೆ ಜನಾರ್ಧನ್ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಮಾಹಿತಿ ನೀಡಿದರೇ, ರಾಜ್ಯ ಸಂಪನ್ಮೂಲ ವ್ಯಕ್ತಿ ಹಳೆಬೂದನೂರು ರಾಣಿಚಂದ್ರಶೇಖರ್ ಅವರು ಮನೆಯಲ್ಲಿ ಸಿದ್ದಗೊಳಿಸಬಹುದಾದ ಪೌಷ್ಠಿಕ ಆಹಾರಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಶಿವಮ್ಮ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿಡಿಓ ಎಂ.ಆರ್.ಅಶ್ವಿನಿ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ನಾಗಮಣಿ ಮಹೇಂದ್ರ, ಚಂದ್ರಶೇಖರ್, ಹೊಂಡಾ ಸಿದ್ದೇಗೌಡ, ಭಾಗ್ಯಮ್ಮ, ಹೇಮಾ, ಅಶ್ವಿನಿ, ಪಿಣ್ಣ ಸತೀಶ್, ಸ್ವಾಮಿ, ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾರತಿ ಶ್ರೀಹರ್ಷ, ಲೆಕ್ಕ ಸಹಾಯಕ ರಾಮು ಸೇರಿದಂತೆ ಹಲವರಿದ್ದರು.

Share this article