ಕನ್ನಡಪ್ರಭ ವಾರ್ತೆ ಹನೂರು
ವಿಷ ಸೇವಿಸಿದ್ದ ಯುವಕನನ್ನು ಚಿಕಿತ್ಸೆಗೆ ಕರೆ ತಂದಾಗ ವೈದ್ಯರಿಲ್ಲದಿರುವುದನ್ನು ಖಂಡಿಸಿ ತಾಲೂಕಿನ ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪೂಜಾರಿ ಬೋವಿ ದೊಡ್ಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ತಾಲೂಕಿನ ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳಿಲ್ಲದೆ ಸಮೀಪದ ಪೂಜಾರಿ ಬೋವಿ ದೊಡ್ಡಿ ಗ್ರಾಮದ ಯುವಕ ಮುತ್ತುರಾಜು ವಿಷ ಸೇವಿಸಿ ಚಿಕಿತ್ಸೆಗೆ ನಿವಾಸಿಗಳು ಕರೆ ತಂದಾಗ ವೈದ್ಯರಿಲ್ಲದೆ ಇಲ್ಲಿನ ಸಿಬ್ಬಂದಿಗಳು ಬೇರೆ ಕಡೆ ಕರೆದುಕೊಂಡು ಹೋಗು ಎಂದು ತಿಳಿಸಿದಾಗ ರೊಚ್ಚಿಗೆದ್ದ ಗ್ರಾಮಸ್ಥರಿಂದ ಆಸ್ಪತ್ರೆ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇದೇ ವೇಳೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಾಗೂ ಬಿಜೆಪಿ ಮಲೆ ಮಾದೇಶ್ವರ ಬೆಟ್ಟದ ಮಂಡಲ ಅಧ್ಯಕ್ಷ ಚಂಗವಾಡಿ ರಾಜು ಮಾತನಾಡಿ, ರಾಮಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳು ಇಲ್ಲದೇ ಇಲ್ಲಿನ ಸುತ್ತಮುತ್ತಲಿನ ಗ್ರಾಮದ ಕಡು ಬಡ ಜನತೆ ಹಾಗೂ ಗುಡ್ಡಗಾಡು ಪ್ರದೇಶದಿಂದ ಬರುವ ಜನತೆಗೆ ಸೂಕ್ತ ಚಿಕಿತ್ಸೆ ಸಿಗದೇ ಜನತೆ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.ಸಂಬಂಧಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಹಾಗೂ ಇಲ್ಲಿನ ಜನಪ್ರತಿನಿಧಿಗಳು ಗಮನಹರಿಸಿ ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕಾಡಂಚಿನ ಜನತೆಗೆ ಆರೋಗ್ಯ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಇಲ್ಲಿನ ಆಸ್ಪತ್ರೆಯ ವೈದ್ಯರು ಕೇಂದ್ರ ಸ್ಥಾನದಲ್ಲಿ ಉಳಿಯಬೇಕು. ಇಲ್ಲಿನ ಜನತೆಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗಲಿದೆ. ಕೂಡಲೇ ಇಲ್ಲಿನ ಆಸ್ಪತ್ರೆಗೆ ವೈದ್ಯಾಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಕೋಟ್ಯಂತರ ರು. ವೆಚ್ಚ ಮಾಡಿ ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಸಿಬ್ಬಂದಿ ವರ್ಗದವರು ಇಲ್ಲದೆ ಕಳೆದ ಒಂದು ವರ್ಷದಿಂದ ಡಯಾಲಿಸಿಸ್ ಮಿಷಿನ್ ತುಕ್ಕು ಹಿಡಿಯುತ್ತಿದೆ. ಹೀಗಾಗಿ ಇಲ್ಲಿನ ಬಡ ಜನತೆಗೆ ಸಿಗಬೇಕಾಗಿದ್ದ ಸರ್ಕಾರಿ ಸೌಲಭ್ಯವಿಲ್ಲದೆ ಕೊಳ್ಳೇಗಾಲ ಚಾಮರಾಜನಗರ ಮೈಸೂರು ಹಾಗೂ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಬೇಕಾಗಿದೆ. ಕೂಡಲೆ ಸಂಬಂಧಪಟ್ಟ ಜಿಲ್ಲಾಡಳಿತ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಆಸ್ಪತ್ರೆಗೆ ವೈದ್ಯಾಧಿಕಾರಿಗಳು ಮತ್ತು ಡಯಾಲಿಸಿಸ್ ಕೇಂದ್ರವನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಮಪುರ ಗಿರೀಶ್, ಆರ್ಮುಗಂ ಎಸ್ಆರ್, ಮಹದೇವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.