ಜನರ ಜೀವ ಹಿಂಡುತ್ತಿದೆ ಮೀನು ಮಾರುಕಟ್ಟೆ

KannadaprabhaNewsNetwork |  
Published : Jun 17, 2024, 01:31 AM IST
ಬನಹಟ್ಟಿಲ್ಲಿನ ಮೀನು ಮಾರುಕಟ್ಟೆ ಸ್ಥಳಾಂತರಿಸುವಂತೆ ಒತ್ತಾಯ | Kannada Prabha

ಸಾರಾಂಶ

ಬನಹಟ್ಟಿಯ ಹೃದಯಭಾಗದ ಬಸ್ ನಿಲ್ದಾಣದ ಕೂಗಳತೆಯಲ್ಲಿ ಪ್ರಮುಖ ರಸ್ತೆಯ ಪಕ್ಕದಲ್ಲೇ ಮೀನು ಮಾರಾಟ ಮಾಡುವ ಮಾರುಕಟ್ಟೆಯಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯ ಹೃದಯಭಾಗದ ಬಸ್ ನಿಲ್ದಾಣದ ಕೂಗಳತೆಯಲ್ಲಿ ಪ್ರಮುಖ ರಸ್ತೆಯ ಪಕ್ಕದಲ್ಲೇ ಮೀನು ಮಾರಾಟ ಮಾಡುವ ಮಾರುಕಟ್ಟೆಯಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಇದನ್ನು ಸ್ಥಳಾಂತರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಮಖಂಡಿ-ಕುಡಚಿ ಪ್ರಮುಖ ರಸ್ತೆಯ ಪಕ್ಕದಲ್ಲಿನ ಬನಹಟ್ಟಿ ಸತ್ಕಾರ ಲಾಡ್ಜ್‌ ಎದುರಿಗೆ ಬೀದಿಗಳಲ್ಲಿ ಮೀನುಗಳನ್ನು ಕೊಚ್ಚಿ ಮಾರುವುದನ್ನು ನೋಡಿದರೆ ಮಹಿಳೆಯರು, ಮಕ್ಕಳು ವಾಕರಿಕೆ ಮಾಡಿಕೊಳ್ಳುವಂತಾಗಿದೆ. ಇದೇ ಮಾರ್ಗದಲ್ಲಿ ಅನೇಕ ಮಕ್ಕಳು ಶಾಲೆ, ಲಕ್ಷ್ಮೀ ನಗರದಲ್ಲಿರುವ ದೇವಸ್ಥಾನಕ್ಕೆ ಹೋಗುವ ಜನರಂತೂ ಇದರಿಂದ ಬೇಸತ್ತು ಹೋಗಿದ್ದಾರೆ. ಮೀನಿನ ರಕ್ತದ ಮೇಲೆ ನೊಣಗಳು ಕುಳಿತು ನಗರದಲ್ಲಿ ಅನಾರೋಗ್ಯ ಸೃಷ್ಟಿಸುವ ಆತಂಕ ಕಾಡುತ್ತಿದೆ. ನಗರಸಭೆ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿ ಬನಹಟ್ಟಿ ನಗರದ ಜನರ ಆರೋಗ್ಯ ಕಾಪಾಡುವುದು ಅಗತ್ಯವಾಗಿದೆ.

ರಸ್ತೆ ಬದಿಯಲ್ಲಿ ಮೀನು ಮಾರುಕಟ್ಟೆ ಇರುವುದರಿಂದ ಅದರ ತ್ಯಾಜ್ಯ ಮತ್ತು ರಕ್ತಮಯವಾದ ಸ್ಥಳ ನೋಡಲು ಆಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಮೀನು ಮಾರಾಟಗಾರರಿಗೆ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಿಕೊಡಬೇಕು. ಇಲ್ಲವಾದರೆ ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಇಲ್ಲಿನ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಮೀನು ಮತ್ತು ಇನ್ನಿತರ ಮಾಂಸ ಮಾರಾಟ ಮಾಡಲು ಅಶೋಕ ಕಾಲೋನಿಯಲ್ಲಿ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಿ ಕೊಡಲಾಗಿದೆ. ಅದೇ ಸ್ಥಳದಲ್ಲಿ ಮಾರಾಟ ಮಾಡಲು ಅನೇಕ ಬಾರಿ ತಿಳಿಸಿದರೂ ವ್ಯಾಪಾರಸ್ಥರು ಅದು ಜನರಿಗೆ ದೂರವಾಗುವುದರಿಂದ ಗ್ರಾಹಕರು ಬರುವುದಿಲ್ಲ. ವ್ಯಾಪಾರ ಕಡಿಮೆಯಾಗುತ್ತದೆ ಎಂಬುದು ಮೀನು ಮಾರಾಟಗಾರರು ತಕರಾರು.

ಜನರಿಗೆ ಸಮಸ್ಯೆಯಾಗುತ್ತಿರುವುದು ನಮ್ಮ ಗಮನಕ್ಕೂ ಬಂದಿದೆ. ಹಾಗಾಗಿಯೇ ಅಶೋಕ ಕಾಲೋನಿಯಲ್ಲಿ ಪ್ರತ್ಯೇಕ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಮಾಂಸ ಮಾರಾಟಗಾರರು ಅಲ್ಲಿಗೆ ಹೋಗಲು ಸಿದ್ಧರಿಲ್ಲ. ಅವರಿಗೆ ತಿಳಿಹೇಳಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು.

ಜಗದೀಶ ಈಟಿ ಪೌರಾಯುಕ್ತರು ನಗರಸಭೆ ರಬಕವಿ-ಬನಹಟ್ಟಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು