ಪರೀಕ್ಷೆ ನಡೆಸಲು ಯಾವುದೇ ಲೋಪಗಳಿಲ್ಲದೇ ಸುಗಮವಾಗಿ ನಡೆಸಲು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಪರೀಕ್ಷೆ ಬರೆಯಬೇಕು.

ಶಿರಹಟ್ಟಿ: ವಿದ್ಯಾರ್ಥಿಗಳೇ ಪರೀಕ್ಷೆ ಎಂದರೆ ಭಯಪಡುವ ವಿಷಯವಲ್ಲ. ಅದು ಪ್ರಯತ್ನವನ್ನು ತೋರಿಸಿಕೊಳ್ಳುವ ಅವಕಾಶ ಮಾತ್ರ. ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಪರೀಕ್ಷೆ ಬರೆಯಬೇಕು ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ಸಲಹೆ ನೀಡಿದರು.ಮಾ. ೧೮ರಿಂದ ಏ. ೨ರ ವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಪಟ್ಟಣದ ಸಿಸಿಎನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೂಗುಚ್ಛ ನೀಡಿ ಸ್ವಾಗತಿಸಿ ಮಾತನಾಡಿದರು.

ಪರೀಕ್ಷೆ ನಡೆಸಲು ಯಾವುದೇ ಲೋಪಗಳಿಲ್ಲದೇ ಸುಗಮವಾಗಿ ನಡೆಸಲು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೇ ಪರೀಕ್ಷೆ ಬರೆಯುವಂತೆ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಮಾತನಾಡಿ, ಪರೀಕ್ಷೆ ದಿನಾಂಕ ನಿಗದಿಯಾದಾಗಿನಿಂದ ತಾಲೂಕಿನ ಎಲ್ಲ ಶಾಲೆಗಳಿಗೆ ನಾಲ್ಕಾರು ಬಾರಿ ಭೇಟಿ ನೀಡಿ ಮಕ್ಕಳ ಓದಿನ ಬಗ್ಗೆ ಹಾಗೂ ಪರೀಕ್ಷೆ ಸಿದ್ಧತೆ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಂಡು ಮಕ್ಕಳು ಪರೀಕ್ಷೆಗೆ ಸಿದ್ಧಗೊಳ್ಳುವಂತೆ ಮಾರ್ಗದರ್ಶನ ಮಾಡಲಾಗಿದೆ ಎಂದರು.

ಪರೀಕ್ಷೆ ಸಮಯಕ್ಕೂ ಮೊದಲೇ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕೀ ನಾಯಕ ಸೇರಿ ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಿ ಸ್ವಾಗತಿಸಿದರು.

ಪರೀಕ್ಷೆಗೆ ಕುಳಿತುಕೊಳ್ಳಬೇಕಿದ್ದ ಒಟ್ಟು ೧೨೦೭ ವಿದ್ಯಾರ್ಥಿಗಳ ಪೈಕಿ ೧೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ೧೧೯೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವೇಳೆ ಎನ್.ಎನ್. ಸಾವಿರಕುರಿ, ಉಮೇಶ ಹುಚ್ಚಯ್ಯನಮಠ, ಹರೀಶ ಎಚ್., ಮಂಜುನಾಥ ನೇಮಗೊಂಡ ಇತರರು ಇದ್ದರು.