ಬಳ್ಳಾರಿ: ಮಾನವನ ಅಗತ್ಯೆಗಳಿಗಾಗಿ ಒಂದು ಮರವನ್ನು ಕಟಾವು ಮಾಡಿದರೆ, ಮುಂದೆ 20 ಗಿಡಗಳನ್ನು ನೆಟ್ಟು ಪೋಷಿಸುವ ಸಂಕಲ್ಪ ಹೊಂದಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಹೇಳಿದರು.
ಭೂಮಿಗೆ 5 ಬಿಲಿಯನ್ ವರ್ಷಗಳ ಇತಿಹಾಸವಿದೆ. ಪ್ರಕೃತಿಯಲ್ಲಿನ ಕೀಟ, ಜಂತು, ಬ್ಯಾಕ್ಟೀರಿಯಾಗಳು, ಪ್ರಾಣಿ-ಪಕ್ಷಿಗಳು, ಸಕಲ ಜಲಚರ ಜೀವಿಗಳೆಲ್ಲವೂ ಮನುಷ್ಯನ ಬದುಕಿಗೆ ಪೂರಕವಾಗಿದ್ದು, ಅದರಲ್ಲಿ ಪರಿಸರವು ಮುಖ್ಯವಾಗುತ್ತದೆ. ಪರಿಸರಕ್ಕೆ ಮಾನವನ ಅಗತ್ಯವಿಲ್ಲ. ಆದರೆ ಮಾನವನಿಗೆ ಪರಿಸರ ಅತಿ ಮುಖ್ಯವಾಗುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥೈಸಿಕೊಳ್ಳಬೇಕು ಎಂದರು.
ಪ್ರಸ್ತುತ ವಿದ್ಯಮಾನದಲ್ಲಿ ಮಾನವನು ಅನೇಕ ಆವಿಷ್ಕಾರಗಳಿಂದ ಅತಿ ವೇಗದಲ್ಲಿ ಮುಂದುವರಿಯುತ್ತಿದ್ದಾನೆ. ಸ್ವಲ್ಪ ನಿಧಾನಗತಿಯಲ್ಲಿ ಚಲಿಸಿದರೆ ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಟಿ.ಎಂ. ಸಿದ್ದೇಶ್ವರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಆವರಣದಲ್ಲಿ ಗಣ್ಯರು ಗಿಡ ನೆಟ್ಟು ನೀರುಣಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಅರುಣ್ ವಿ., ಬಳ್ಳಾರಿ ಬಿಸಿನೆಸ್ ಕಾಲೇಜಿನ ನಿರ್ದೇಶಕ ಅಮರ್ ರಾಜ್ ಭೂಪಾಲ್, ಕನ್ನಡ ಉಪನ್ಯಾಸಕ ಪ್ರಭಾಕರ್ ಜೋಯಿಸ್ ಮತ್ತು ಸ್ಮಯೋರ್ ಕಂಪನಿಯ ಸಿಒಒ ಮಂಜುನಾಥ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ತರಬೇತಿದಾರ ನಾಗರಾಜ, ಅಧಿಕಾರಿಗಳು, ಸಿಬ್ಬಂದಿ ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.