ಇತರರಿಗೆ ಒಳಿತು ಮಾಡಿದರೆ ಮನೋಲ್ಲಾಸ: ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ

KannadaprabhaNewsNetwork |  
Published : Apr 04, 2024, 01:02 AM IST
ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳು ಆಶಿರ್ವಚನ ನೀಡುತ್ತಿರುವುದು. | Kannada Prabha

ಸಾರಾಂಶ

ಕರ್ಕಿಯ ಜ್ಞಾನೇಶ್ವರೀ ಪೀಠದ ದೈವಜ್ಞ ಬ್ರಾಹ್ಮಣ ಸಮಾಜದ ಉತ್ತರಾಧಿಕಾರಿ ವಟುವಿನ ಸನ್ಯಾಸ ಸ್ವೀಕಾರ ಕಾರ್ಯಕ್ರಮ ನೆರವೇರಿತು.

ಹೊನ್ನಾವರ: ನಾವು ಒಳಿತು ಮಾಡಿದರೆ ನಮಗೆ ಒಳಿತಾಗುತ್ತದೆ. ಸಂತೋಷ, ಆನಂದ, ಮನೋಲ್ಲಾಸದ ಕ್ಷಣ ಉಂಟಾಗುತ್ತದೆ. ಮನಸ್ಸು, ಹೃದಯ ಅರಿತು ನಡೆದರೆ ನಮ್ಮ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ತಿಳಿಸಿದರು.

ಕರ್ಕಿಯ ಜ್ಞಾನೇಶ್ವರೀ ಪೀಠ ದೈವಜ್ಞ ಬ್ರಾಹ್ಮಣ ಮಠದ ಆಶ್ರಯದಲ್ಲಿ ಶ್ರೀಮಠದ ಆವರಣದಲ್ಲಿ ಬುಧವಾರ ನಡೆದ ಜ್ಞಾನೇಶ್ವರೀ ಪೀಠದ ದೈವಜ್ಞ ಬ್ರಾಹ್ಮಣ ಸಮಾಜದ ಉತ್ತರಾಧಿಕಾರಿ ವಟುವಿನ ಸನ್ಯಾಸ ಸ್ವೀಕಾರ ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದರು. ನನ್ನ ಬಹುಕಾಲದ ಸಂಕಲ್ಪ ಶ್ರೀದೇವಿ ಪೂರ್ಣಗೊಳಿಸಿದ್ದಾಳೆ. ಸನ್ಯಾಸ ಸ್ವೀಕಾರಕ್ಕೆ ಸನ್ನಿವೇಶ ಸೃಷ್ಟಿ ಮಾಡಿದ್ದಳು. ಕಳೆದ ಮೂರು ವರ್ಷಗಳಿಂದ ವಿಷಯ ಪ್ರಸ್ತಾಪವಾಗಿತ್ತು. ಕೊರೋನಾ ಕಾರಣದಿಂದ ಕಾರ್ಯಕ್ರಮ ವಿಳಂಬವಾಯಿತು. ಆರ್.ಎಸ್. ರಾಯ್ಕರ್ ಮುತುವರ್ಜಿ ವಹಿಸಿಕೊಂಡು ಕಾರ್ಯರೂಪವಾಗುವಂತೆ ಮಾಡಿದರು. ಎಲ್ಲರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಸುಜ್ಞಾನೇಶ್ವರ ಸ್ವಾಮಿಗಳ ತಂದೆ ಗುರುನಾಥ, ತಾಯಿ ದೀಪ ಅವರ ತ್ಯಾಗ ಅಮೂಲ್ಯವಾದದು. ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಶಿಷ್ಯ ಸ್ವೀಕಾರ ಎನ್ನುವುದಕ್ಕೆ ಸುಯೋಗ ಬೇಕು. ಅದು ಇಂದು ನೆರವೇರಿದೆ ಎಂದರು. ಸನ್ಯಾಸ ಸ್ವೀಕರಿಸಿದ ಶ್ರೀಮಠದ ನೂತನ ಉತ್ತರಾಧಿಕಾರಿ ಸುಜ್ಞಾನೆಶ್ವರ ಭಾರತಿ ಸ್ವಾಮೀಜಿ ಮಾತನಾಡಿ, ಭವ್ಯ ದೇವಾಲಯ, ಗುರುಪೀಠ, ಅನ್ನಛತ್ರ, ವೇದಶಾಲೆ ಶ್ರೀದೇವಿಯ ಅನುಗ್ರಹ, ಗುರುಕೃಪೆಯಿಂದ ಸಾಧ್ಯವಾಗಿದೆ. ಮೂಲಗುರುಗಳು ವೃಕ್ಷವಿದ್ದಂತೆ ಉಳಿದ ಗುರುಗಳು ವೃಕ್ಷದ ಕೊಂಬೆಯಂತೆ. ಮಠದಿಂದ ಬಡವರಿಗೆ, ಸಮಾಜಕ್ಕೆ ಅನೇಕ ಕಾರ್ಯಗಳಾಗಿ ಉನ್ನತ ಮಟ್ಟಕ್ಕೇರುವಂತಾಗಿದೆ. ಗುರುವಿನ ಮಾರ್ಗದರ್ಶನ, ಸಂಕಲ್ಪದಂತೆ ಕಾರ್ಯ ಮಾಡಲು ಪ್ರಯತ್ನ ಮಾಡುವೆ ಎಂದರು.

ಕಾರವಾರದ ಸಂತೋಷಿ ಮಾತಾ ದೇವಿಯಿಂದ ಪ್ರೇರಣೆಯಾಗಿತ್ತು. ಅಲ್ಲಿನ ಗುರುಗಳ ಸಂಪರ್ಕಿಸಿದಾಗ ನಿಮ್ಮ ಗುರುಪೀಠದ ಗುರುಗಳನ್ನು ಕೇಳಿ ಎಂದಿದ್ದರು. ದೇವರಲ್ಲಿಯು ಸನ್ಯಾಸ ಸ್ವೀಕಾರದ ಬಗ್ಗೆ ಪ್ರಸಾದವಾಗಿತ್ತು. ನಂತರ ಶ್ರೀಮಠಕ್ಕೆ ಬಂದು ಗುರುಗಳಲ್ಲಿ ಕೇಳಿದಾಗ ಶಿಷ್ಯತ್ವ ಒಂದೇ ಬಾರಿಗೆ ಪಡೆಯುವುದಲ್ಲ. ಹಂತ- ಹಂತವಾಗಿ ನಡೆಯುವ ಪ್ರಕ್ರಿಯೆ ಎಂದಿದ್ದರು. ಆ ಪ್ರಕಾರವಾಗಿ ಶಿಷ್ಯ ಸ್ವೀಕಾರ ನಡೆದಿದೆ ಎಂದರು.

ಸಂಸ್ಕ್ರತ ಪ್ರಾಧ್ಯಾಪಕ ಪತಂಜಲಿ ವಿಣಾಕರ್ ಮಾತನಾಡಿ, ಸನ್ಯಾಸ ಸ್ವೀಕಾರ ಎಂದರೆ ತಮ್ಮ ಕುಟುಂಬವನ್ನು ಜತೆಗೆ ಸ್ವಾರ್ಥ, ಕ್ರೊಧ ಎಲ್ಲವನ್ನೂ ತ್ಯಜಿಸಿ ಬರುವಂತದ್ದಾಗಿರುತ್ತದೆ. ಆದರೆ ನಾವು ಇಂದು ನಮ್ಮ ಸಂಸಾರ ತಾಪತ್ರಯಗಳನ್ನು ಅವರ ಬಳಿ ನಿವೇದನೆ ಮಾಡುತ್ತೇವೆ ಎಂದರು.

ತಾಲೂಕು ದೈವಜ್ಞ ವಾಹಿನಿ ಅಧ್ಯಕ್ಷ ‌ಕೃಷ್ಣಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಧಾರವಾಡ ಶಂಕರಾಚಾರ್ಯ ಸಂಸ್ಕೃತ ವೇದ ಪಾಠಶಾಲೆ ಮುಖ್ಯಸ್ಥ ರಾಜೇಶ್ವರ ಶಾಸ್ತ್ರಿ, ದೈವಜ್ಞ ಬ್ರಾಹ್ಮಣ ಮಠ ಟ್ರಸ್ಟ್‌ ಉಪಾಧ್ಯಕ್ಷ ಆರ್‌.ಎಸ್. ರಾಯ್ಕರ್, ಆರ್.ಪಿ. ರಾಯ್ಕರ್, ರಾಮಚಂದ್ರ ಭಟ್ಟ, ಎಂ.ಎಸ್. ಅರುಣ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ