ಸಂಚಾರಿ ನಿಯಮ ಪಾಲಿಸದಿದ್ದರೆ ನಿಮ್ಮ ಕುಟುಂಬ ಬೀದಿಪಾಲು; ಡಿವೈಎಸ್ಪಿ ಕೃಷ್ಣಪ್ಪ

KannadaprabhaNewsNetwork | Published : May 13, 2024 12:04 AM

ಸಾರಾಂಶ

ಚಾಲಕರು ವಾಹನದಲ್ಲಿ ಕುಳಿತಾಗ ತಮ್ಮ ಕುಟುಂಬ ಮತ್ತು ಅವಲಂಬಿತರ ಬಗ್ಗೆಯೂ ಚಿಂತನೆ ನಡೆಸಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಾಹನ ಸವಾರರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ನೀವು ಹಾಗೂ ಅಮಾಯಕರು ಜೀವ ಕಳೆದುಕೊಂಡು ನಿಮ್ಮನ್ನು ಅವಲಂಬಿತರು ಬೀದಿ ಪಾಲಾಗುವ ಸಾಧ್ಯತೆ ಇದೆ ಎಂದು ಡಿವೈಎಸ್ಪಿ ವಿ.ಕೃಷ್ಣಪ್ಪ ಎಚ್ಚರಿಕೆ ನೀಡಿದರು.

ಪಟ್ಟಣದ ಶಾಂತಿ ಕಾಲೇಜಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಮಾತನಾಡಿ, ಪ್ರಸ್ತುತ ಅನೇಕ ಅಪಘಾತಗಳು ಮಾನವನ ತಪ್ಪುಗಳಿಂದಲೇ ಸಂಭವಿಸುತ್ತಿವೆ. ಇದ್ದರಿಂದ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ‌ ಎಂದರು.

ಚಾಲಕರು ವಾಹನದಲ್ಲಿ ಕುಳಿತಾಗ ತಮ್ಮ ಕುಟುಂಬ ಮತ್ತು ಅವಲಂಬಿತರ ಬಗ್ಗೆಯೂ ಚಿಂತನೆ ನಡೆಸಬೇಕು. ಎಲ್ಲಕ್ಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು. ಅಲ್ಲದೇ ಅಪ್ರಾಪ್ತರಿಗೆ ವಾಹನಗಳನ್ನು ನೀಡಬಾರದು ಎಂದು ಸೂಚಿಸಿದರು.

ಗ್ರಾಮಾಂತರ ಸಿಪಿಐ ಬಿ.ಜಿ.ಮಹೇಶ್ ಮಾತನಾಡಿ, ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು. ಎಲ್ಲ ವಾಹನ ಚಾಲಕರು ಹಾಗೂ ಮಾಲೀಕರು ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳ ಹೊಂದಿರಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಸಹ ಕಾನೂನಿನ ಬಗ್ಗೆ ನಿಮ್ಮ ಮನೆಯವರಿಗೆ ಅರಿವು ಮೂಡಿಸಬೇಕು. ನಿಮಗೆ ಏನಾದರೂ ತೊಂದರೆಯಾದಾಗ ಹಾಗೂ ಅಗತ್ಯ ಸಂದರ್ಭದಲ್ಲಿ ತುರ್ತು ಕರೆ ಸಂಖ್ಯೆ 112 ಕರೆ ಮಾಡಿ ಸಹಾಯ ಪಡೆಯಬಹುದು ಎಂದು ತಿಳಿಸಿದರು.

ಶಾಂತಿ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ನಾಮಫಲಕ ಅಳವಡಿಕೆ:

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಪಘಾತ ವಲಯಗಳು, ಶಾಲಾ ಕಾಲೇಜು, ಪ್ರಮುಖ ವೃತ್ತಗಳು ಸೇರಿದಂತೆ ಹಲವೆಡೆ ರಸ್ತೆ ಸುರಕ್ಷತಾ ಕುರಿತಾ ನಾಮಫಲಕಗಳನ್ನು ಅಳವಡಿಸಿ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಜಾಗೃತಿ ಮೂಡಿಸಲಾಯಿತು.

Share this article