ಈದ್ ಮಿಲಾದ್ ಕಾರ್ಯಕ್ರಮದಲ್ಲಿ ತುಂಗಭದ್ರಾ ಕಾಡಾ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಹನುಮಸಾಗರಕುರಾನ ಮತ್ತು ಹದೀಸನ ಪ್ರಕಾರ ನಡೆದರೆ ನೀವು ಜನ್ನತನ್ನು ಮುಟ್ಟಬಹುದು ಎಂದು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ ದೋಟಿಹಾಳ ಹೇಳಿದರು.
ಗ್ರಾಮದ ಖದ್ರಿಯಾ ಮಸೀದಿಯಲ್ಲಿ ಸೋಮವಾರ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದರು.ಮುಸ್ಲಿಂ ಸಮುದಾಯದವರು ನಿತ್ಯ ಹದೀಸ ಮತ್ತು ಕುರಾನ ಪಠಣ ಮಾಡಬೇಕು. ಪ್ರವಾದಿ ಮಹಮ್ಮದರ ಕಾರ್ಯಕ್ರಮಕ್ಕಾಗಿ ಸೀಮಿತವಾಗಬಾರದು. ಪೈಗಂಬರ್ ಅವರ ಕೊಡುಗೆ ಅನನ್ಯವಾದದ್ದು, ಅವರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಪಾವನ ಪಾವನವಾಗುತ್ತದೆ ಎಂದರು.
ಪ್ರವಚನಕಾರ ಮೌಲಾ ಹುಸೇನ ಪಾರಾಪುರ ಮಾತನಾಡಿ, ನಮ್ಮದು ಬಹುಧರ್ಮೀಯ ದೇಶ. ಎಲ್ಲ ಧರ್ಮಗಳ ಸಾರವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಧರ್ಮ ಎಂದರೆ ಪ್ರೀತಿ, ಸೌಹಾರ್ದತೆಯಿಂದ ನಡೆಯುವುದು. ಆದರೆ ಇಂದಿನ ದಿನಮಾನಗಳಾಗಲಿ ಧರ್ಮಗಳಲ್ಲಿ ಕಲಹಗಳಾಗುತ್ತಿವೆ. ಮಾನವ ಕುಲಕ್ಕೆ ಧರ್ಮವನ್ನು ಬೋಧಿಸಲಿಕ್ಕೆ ಪ್ರವಾದಿಗಳು ಜನನವಾದರು. ಮನುಷ್ಯರಿಗೆ ಬದುಕನ್ನು ಕಲಿಸಿದವರು, ಸಮಾಜದಲ್ಲಿ ಅನೇಕ ಕಂದಾಚಾರವನ್ನು ಹೊಗಲಾಡಿಸಿದವರು. ಮನುಷ್ಯತ್ವವನ್ನು ಕಲಿಸಿದವರು. ಎಲ್ಲರಲ್ಲೂ ಬೆರೆತು ಮರೆತು ಬಾಳುವನನ್ನು ಮನುಷ್ಯ ಎನ್ನುತ್ತಾರೆ. ಈ ಜಗತ್ತಿಗೆ ಒಬ್ಬನೆ ದೇವರಿದ್ದಾನೆ ಎಂದು ನಂಬಿ ಎಲ್ಲ ದಾರ್ಶಿನಿಕರು, ಸಂತರು, ಮಹಾತ್ಮರು, ಪ್ರವಾದಿಗಳು ಹೇಳಿದ್ದಾರೆ ಎಂದರು.ನಾವೆಲ್ಲರೂ ಶ್ರೇಷ್ಠರಲ್ಲ, ಕನಿಷ್ಠರು. ಎಲ್ಲರೂ ಸಮಾನರು. ಯಾರು ನಿರಾಕರಿಸಿದರು ಮರಣದ ಸಮಯ ಬಂದೆ ಬರುತ್ತದೆ. ಅದನ್ನು ಎಲ್ಲರೂ ಸ್ವೀಕಾರ ಮಾಡಬೇಕು. ನಾವು ಮಾಡಿದ ಸತ್ಕರ್ಮಗಳು ನಮ್ಮನ್ನು ಕಾಪಾಡುತ್ತವೆ. ಇಲ್ಲಿ ಇರುವತನಕ ಮನುಷ್ಯ ಸತ್ಕರ್ಮಗಳನ್ನು ಮಾಡಬೇಕು. ಮನುಷ್ಯರಾಗಿ ಸಮಾನವಾಗಿ ಬಾಳಿ ಎಂದು ಕರೆ ನೀಡಿದರು.ಇದೇ ಸಂದರ್ಭ ಎಸ್ಎಸ್ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದವರಿಗೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುರಾನ ಪುಸ್ತಕದೊಂದಿಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ಮಾಡಲಾಯಿತು.
ಸೈಯದ ಪಾಶಾ ಅಬ್ದುಲ್ ಹುಸೇನ ಖಾದ್ರಿ ಸಾನಿಧ್ಯ ವಹಿಸಿದ್ದರು. ಗೇಸುದರಾಜ ಮೂಲಿಮನಿ, ವಿಶ್ವನಾಥ ಕನ್ನೂರ,ಸಂಗಯ್ಯ ವಸ್ತ್ರದ, ಪಿಎಸ್ಐ ಧನಂಜಯ, ಮಹಾತೇಶ ಅಗಸಿಮುಂದಿನ, ಸುಚಪ್ಪ ದೇವರಮನಿ, ಪ್ರಶಾಂತ ಕುಲಕರ್ಣಿ, ಗೌಸಮುಂದಿನ ವಂಟೆಳ್ಳಿ, ಮೈನುದ್ದಿನ್ ಖಾಜಿ, ಶ್ರೀಶೈಲ ಮೋಟಗಿ, ಮಂಜುನಾಥ ಹುಲ್ಲೂರ, ಪ್ರಶಾಂತ ಕುಲಕರ್ಣಿ, ಮಲಾಲಿ ಮೋಟಗಿ, ಖಾದರಸಾಬ ತಹಶಿಲ್ದಾರ, ಅಬ್ದುರಜಾಕ ಟೇಲರ, ರಿಯಾಜ ಖಾಜಿ, ಡಾ. ನಜಿರಅಹಮದ ಮೆಣೆದಾಳ, ಹುಸೇನಸಾಬ ಮುದಗಲ್ಲ ಇತರರು ಇದ್ದರು.