ಕ್ಷೇತ್ರದಲ್ಲಿ ಲೀಡ್‌ ಕೊಟ್ಟರೆ ಸಿಎಂ ಬಳಿ ಅನುದಾನ ಕೇಳಬಹುದು: ಶಾಸಕ

KannadaprabhaNewsNetwork | Published : Apr 17, 2024 1:18 AM

ಸಾರಾಂಶ

ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ನೀಡಿ ಲೀಡ್‌ ಕೊಡಿಸಿದರೆ ಇನ್ನಷ್ಟು ಅನುದಾನ ಮುಖ್ಯಮಂತ್ರಿಗಳ ಬಳಿ ಕೇಳಲು ನನಗೆ ಹಕ್ಕು ಸಿಗುತ್ತದೆ.

ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ

ಕನ್ನಡಪ್ರಭ ವಾರ್ತೆ ಕುಕನೂರು

ನನ್ನ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ನೀಡಿ ಲೀಡ್‌ ಕೊಡಿಸಿದರೆ ಇನ್ನಷ್ಟು ಅನುದಾನ ಮುಖ್ಯಮಂತ್ರಿಗಳ ಬಳಿ ಕೇಳಲು ನನಗೆ ಹಕ್ಕು ಸಿಗುತ್ತದೆ. ಇನ್ನಷ್ಟು ಹೆಚ್ಚು ಕೆಲಸ (ಯೋಜನೆ) ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಪಟ್ಟಣದಲ್ಲಿ ಜರುಗಿದ ಲೋಕಸಭೆ ಚುನಾವಣೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳಗೆ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಲೀಡ್ ಕೊಟ್ಟರೆ, ನಾನು ಇನ್ನಷ್ಟು ಹೆಚ್ಚು ಕೆಲಸ ತೆಗೆದುಕೊಂಡು ಬರಲು ಸಾಧ್ಯವಾಗುತ್ತದೆ. ನಮ್ಮ ಅಭಿವೃದ್ಧಿ ಮತ್ತು ಕಾಂಗ್ರೆಸ್‌ ಜನಪರ ಕಾರ್ಯ ಮೆಚ್ಚಿ ಹೆಚ್ಚು ಮತ ನೀಡಬೇಕು ಅಂದಾಗ, ನಮಗೆ ಇನ್ನಷ್ಟು ಅನುದಾನ ನೀಡಿ ಎಂದು ಸಿಎಂ ಅವರಲ್ಲಿ ಕೇಳಲು ನನಗೆ ಹಕ್ಕು ಸಿಗುತ್ತದೆ. ಲೀಡ್ ಕೊಟ್ಟು, ಕ್ಷೇತ್ರದ ಅಭಿವೃದ್ಧಿ ಕೆಲಸ ಪಡೆದುಕೊಳ್ಳಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಮಂಕುಬೂದಿ ಎರಚುತ್ತಿರುವ ಮೋದಿ:

ಕಪ್ಪು ಹಣ ತಂದು ಎಲ್ಲರ ಖಾತೆಗೆ ₹15 ಲಕ್ಷ ಹಾಕುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಹೇಳಿ ಜನರಿಗೆ ಮಂಕು ಬೂದಿ ಎರಚಿದ್ದರು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಆರೋಪಿಸಿದರು.

ಕಪ್ಪು ಹಣ ತಂದು ಇನ್ನೊಬ್ಬರ ಖಾತೆಗೆ ಹಾಕುವುದು ಸುಲಭದ ಮಾತಲ್ಲ. ಕಪ್ಪು ಹಣಕ್ಕೆ ಶೇ. 30 ಟ್ಯಾಕ್ಸ್, ಶೇ. 30 ದಂಡ ಬೀಳುತ್ತದೆ. ಉಳಿದ ಶೇ. 40 ಹಣದ ಮಾಲಕರದ್ದಾಗುತ್ತದೆ. ಅದು ಹೇಗೆ ಮೋದಿ ಎಲ್ಲರ ಖಾತೆಗೆ ಹಣ ಹಾಕುತ್ತಾರೆ ಎಂದು ಪ್ರಶ್ನಿಸಿದ ರಾಯರಡ್ಡಿ, ಜನರಿಗೆ ಇಂತಹ ಮಂಕುಬೂದಿ ಎರಚುವ ಕಾರ್ಯ ಮಾಡಬಾರದು ಎಂದರು.

ಕುಕನೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಚಂಡೂರು, ಯಲಬುರ್ಗಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ, ಪ್ರಮುಖರಾದ ಯಂಕಣ್ಣ ಯರಾಶಿ, ನಾರಾಯಣಪ್ಪ ಹರಪನ್ಹಳ್ಳಿ, ಕೆರಿಬಸಪ್ಪ ನಿಡಗುಂಡಿಲ್, ಖಾಸಿಂಸಾಬ್ ತಳಕಲ್, ವೀರಯ್ಯ ತೋಂಟದಾರ್ಯಮಠ, ರೆಹೆಮಾನಸಾಬ್ ಮಕ್ಕಪ್ಪನವರ್, ಪಪಂ ಸದಸ್ಯರಾದ ಗಗನ ನೋಟಗಾರ, ಸಿರಾಜ ಕರಮುಡಿ, ನೂರುದ್ದೀನ್ ಗುಡಿಹಿಂದಲ್, ಸಂಗಮೇಶ ಗುತ್ತಿ, ಬಸವರಾಜ ಮಾಸೂರು, ರಾಘವೇಂದ್ರ ಕಾತರಕಿ, ಮಂಜು ಯಡಿಯಾಪೂರ ಇತರರಿದ್ದರು.

Share this article