ಕನ್ನಡಪ್ರಭ ವಾರ್ತೆ ಬೆಂಗಳೂರು ಬಾಯಿ ಕ್ಯಾನ್ಸರ್, ಮೊಬೈಲ್ ಆ್ಯಪ್, ಬೆಂಗಳೂರು ಟೆಕ್ ಸಮ್ಮಿಟ್, ಬೆಂಗಳೂರು ಸುದ್ದಿ
ಮೊಬೈಲ್ ಆ್ಯಪ್ ಮೂಲಕವೇ ಬಾಯಿ ಕ್ಯಾನ್ಸರ್ ಪತ್ತೆ ಹಚ್ಚುವುದು, ಮನುಷ್ಯರ ಮತ್ತು ಎಂಜಿನ್‌ನ ಸಂಪರ್ಕವೇ ಇಲ್ಲದೇ ಕೇವಲ ರಿಮೋಟ್‌ನಲ್ಲಿ ಚಲಿಸುವ ಟ್ರಾಲಿ, ಕನ್ನಡಕದ ಮೂಲಕವೇ ವ್ಯಕ್ತಿ, ಭಾವನೆ ಗುರುತಿಸುವಂತಹ ವ್ಯವಸ್ಥೆ.... ಹೀಗೆ ನಾನಾ ಆವಿಷ್ಕಾರಗಳು 27ನೇ ಆವೃತ್ತಿಯ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಅನಾವರಣಗೊಂಡಿವೆ.ತಂತ್ರಜ್ಞಾನಗಳ ಭಂಡಾರವಾಗಿರುವ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಹಲವು ಆವಿಷ್ಕಾರಗಳು, ಹೊಸ ತಂತ್ರಜ್ಞಾನಗಳು ಸೆಳೆಯುತ್ತಿವೆ. ಉದಾಹರಣೆಗೆ ಆರ್ಟ್‌ಪಾರ್ಕ್ ಸಹಯೋಗದಲ್ಲಿ ಐಐಎಸ್ಸಿ, ಬಾಯಿಯ ಆರೋಗ್ಯ ಮತ್ತು ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬುದನ್ನು ಪತ್ತೆ ಹಚ್ಚುವ ಆರೋಗ್ಯ ಆರೋಹಣ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದ್ದು, ಟೆಕ್ ಸಮ್ಮಿಟ್‌ನಲ್ಲಿ ಪ್ರದರ್ಶನಗೊಳಿಸಲಾಗುತ್ತಿದೆ.
ಈ ಆ್ಯಪ್ ಮೂಲಕ ಯಾವುದೇ ವ್ಯಕ್ತಿಯ ಬಾಯೊಳಗಿನ ಭಾವಚಿತ್ರವನ್ನು ತೆಗೆದ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದರೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಆ ವ್ಯಕ್ತಿಯ ಬಾಯಿಯ ಆರೋಗ್ಯದ ಪ್ರಮಾಣವನ್ನು ತಿಳಿಸಲಿದೆ. ಅದರಿಂದಾಗಿ ಬಾಯಿ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.ಐಐಟಿ ಮದ್ರಾಸ್‌ನ ಇಬ್ಬರು ವಿದ್ಯಾರ್ಥಿಗಳು ಪನೋಕ್ಯುಲೊನ್ ಲ್ಯಾಬ್ ಜತೆಗೂಡಿ ಸೆನ್ಸಾರ್ ಆಧಾರಿತ ಕನ್ನಡಕ ಅಭಿವೃದ್ಧಿಪಡಿಸಿದ್ದಾರೆ. ಈ ಕನ್ನಡಕದಲ್ಲಿ ಕ್ಯಾಮೆರಾ, ಸೆನ್ಸರ್, ಮೈಕ್ರೋಫೋನ್, ಸ್ಪೀಕರ್ ಅಳವಡಿಸಲಾಗಿದೆ. ಆ ಕನ್ನಡಕವನ್ನು ಮೊಬೈಲ್ ಅಥವಾ ಕಂಪ್ಯೂಟರ್‌ಗೆ ಕನೆಕ್ಟ್ ಮಾಡಬಹುದಾಗಿದೆ. ಹೀಗಾಗಿ ಅದರಿಂದ ಯಾವುದೇ ವ್ಯಕ್ತಿಯನ್ನು ನೋಡಿದರೆ ಅಥವಾ ಅವರ ಭಾವನೆಗಳ ಕುರಿತ ಮಾಹಿತಿ ಕನ್ನಡಕ ಕನೆಕ್ಟ್ ಆಗಿರುವ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ದೊರೆಯಲಿದೆ. ಅದರ ಜತೆಗೆ ಭಾರತೀಯ ಭಾಷೆಗಳ ಅಕ್ಷರಗಳನ್ನು ಗುರುತಿಸುವುದು ಹೀಗೆ ಹಲವು ಕಾರ್ಯಗಳು ಮೊಬೈಲ್ ಮೂಲಕವೇ ಮಾಡಬಹುದಾಗಿದೆ.ಸ್ವಯಂ ಚಾಲಿತ ಟ್ರಾಲಿ
ಇವುಗಳ ಜತೆಗೆ ಯಾವುದೇ ಎಂಜಿನ್ ಅಥವಾ ಮನುಷ್ಯರ ಬಲದ ಅವಶ್ಯಕತೆಯಿಲ್ಲದೆ ಸಂಚರಿಸುವ ಟ್ರಾಲಿಯು ಎಲ್ಲರನ್ನು ಆಕರ್ಷಿಸುತ್ತಿದೆ. ಫ್ಲೋ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಟ್ರಾಲಿಯು ಬ್ಯಾಟರಿ ಆಧಾರಿತ ಮತ್ತು ರಿಮೋಟ್ ಮೂಲಕ ನಿಯಂತ್ರಿಸಬಹುದಾಗಿದೆ. ಅಲ್ಲದೆ, ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಈ ಟ್ರಾಲಿಯನ್ನು ಬಳಸಬಹುದಾಗಿದ್ದು, 500 ಕೇಜಿವರೆಗಿನ ವಸ್ತುಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ.