- ಹಾಲಿವಾಣದಲ್ಲಿ ಬೀರಲಿಂಗೇಶ್ವರ ದೊಡ್ಡ ಎಡೆ ಮಹೋತ್ಸವ, ಸಾಮೂಹಿಕ ವಿವಾಹ ಸಮಾರಂಭ
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಯುವಕರು ದುಶ್ಚಟಗಳಿಂದ ಮುಕ್ತರಾದಾಗ ಕನ್ಯೆಗಳು ದೊರಕಿ ಲಗ್ನವಾಗುತ್ತವೆ. ಅನಂತರ ಹೊಸ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕುಂಚುಟಿಗ ಮಠದ ಶಾಂತವೀರ ಸ್ವಾಮೀಜಿ ನುಡಿದರು.ಇಲ್ಲಿಗೆ ಸಮೀಪದ ಹಾಲಿವಾಣ ಗ್ರಾಮದಲ್ಲಿ ಬೀರಲಿಂಗೇಶ್ವರ ದೇವಾಲಯದ ಸಮಿತಿ ಶುಕ್ರವಾರ ಏರ್ಪಡಿಸಿದ್ದ ಬೀರಲಿಂಗೆಶ್ವರ ದೊಡ್ಡ ಎಡೆ, ಮಹೋತ್ಸವ ಸಾಮೂಹಿಕ ವಿವಾಹ ಮಹೋತ್ಸವ, ಧಾರ್ಮಿಕ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಸಂದೇಶ ನೀಡಿದರು.
ಹತ್ತನೇ ತರಗತಿ ಓದಿ ದುಶ್ಚಟಗಳಿಗೆ ದಾಸರಾದ ಯುವಕರಿಗೆ ಡಿಗ್ರಿ ಓದಿದ ಯುವತಿ ಲಗ್ನವಾಗಲು ಮುಂದೆ ಬಾರದ ಸ್ಥಿತಿ ಇದೆ. ಸರ್ಕಾರ ಮದ್ಯವನ್ನು ಕುಡಿಸೋದು, ಕುಡಿಬೇಡಿ ಎಂದು ಜನಪ್ರತಿನಿಧಿಗಳು ಭಾಷಣ ಮಾಡೋದು ಯಾವ ನ್ಯಾಯ? ಸರ್ಕಾರವೇ ಮದ್ಯವನ್ನು ನಿಷೇಧ ಮಾಡಬೇಕು ಅಥವಾ ಮಹಿಳಾ ಸಂಘಟನೆಗಳು ಪಾನ ನಿಷೇಧಕ್ಕೆ ಬಡಿಗೆ ಹಿಡಿದು ಸಿದ್ಧರಾಗಿ ನಿಲ್ಲಬೇಕು ಎಂದು ಸ್ವಾಮೀಜಿ ತಾಕೀತು ಮಾಡಿದರು.
ಭಾಜಪ ಮುಖಂಡ ಚಂದ್ರಶೇಖರ್ ಮಾತನಾಡಿ, ಭಾರತದಲ್ಲಿ ಗಂಡು- ಹೆಣ್ಣಿನ ಅನುಪಾತ ಸಮನಾಗಿದೆ. ಯುವಕರಿಗೆ ವಿವಾಹಕ್ಕೆ ಕನ್ಯೆ ಸಿಗಲ್ಲ ಎಂಬ ಮಾತು ಸುಳ್ಳಾಗಿದೆ. ಕಾಯಕವನ್ನೇ ಮರೆತು ಯುವಕರು ವ್ಯಸನಿಗಳಾಗಬಾರದು. ಇಲ್ಲಿನ ೧೨ ನವ ಜೋಡಿಗಳಿಂದ ಪೋಷಕರ ₹೫೦ ಲಕ್ಷ ಉಳಿತಾಯವಾಗಿದೆ ಎಂದರು.
ಹದಡಿ ಚಂದ್ರಗಿರಿ ಮಠದ ಮುರಳೀಧರ ಸ್ವಾಮೀಜಿ ಹಾಜರಿದ್ದರು. ಬಿ.ಕೆ. ಲೀಲಾಜಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಿಯದರ್ಶಿನಿ, ಮೇಲ್ವಿಚಾರಕಿ ಗೀತಾ, ಡಾ. ರಶ್ಮಿ, ಕುಂಬಳೂರು ವಿರೂಪಾಕ್ಷಪ್ಪ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀದೇವಿ, ಎಸ್.ಜಿ. ಬಸವರಾಜಪ್ಪ, ಎಸ್.ಜಿ. ಪರಮೇಶ್ವರಪ್ಪ, ಪಿ.ಹಾಲೆಶಪ್ಪ, ಚಿಕ್ಕಪ್ಪ, ಮಂಜುಳಮ್ಮ, ಗಂಗಮ್ಮ, ವಿಜಯಲಕ್ಷ್ಮೀ, ಜಿ.ಮಂಜುನಾಥ್ ಜನಪ್ರತಿನಿಧಿಗಳು ಇದ್ದರು. ಪ್ರೇರಣಾ ಗೆಳಯರ ಬಳಗದ ಪದಾಧಿಕಾರಿಗಳು ನವಜೋಡಿಗಳಿಗೆ ಕಾಣಿಕೆ ವಿತರಿಸಿದರು.
-ಚಿತ್ರ-೩: