- ಬಾಪೂಜಿ ಸಭಾಂಗಣದಲ್ಲಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭ
ಕನ್ನಡಪ್ರಭ ವಾರ್ತೆ ದಾವಣಗೆರೆ ಪ್ರತಿಯೊಬ್ಬರ ಜೀವನದಲ್ಲಿ ಸ್ಪಷ್ಟವಾದ ಗುರಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ವೈದ್ಯರ ಜೀವನದಲ್ಲಿ ಪ್ರತಿದಿನವೂ ಕಲಿಕೆಯ ದಿನವಾಗಿದ್ದು, ತಮ್ಮನ್ನು ಬೆಳೆಸಿದ ಪೋಷಕರು ಹಾಗೂ ಶಿಕ್ಷಣ ನೀಡಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಡಾ. ಎಚ್.ಬಸವನಗೌಡ ಹೇಳಿದರು.
ನಗರದ ಬಾಪೂಜಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮಲ್ಲಿರುವ ದೌರ್ಬಲ್ಯಗಳು ಸಾಧನೆಗೆ ಅಡ್ಡಿಯಾಗಬಾರದು. ಅನೇಕ ಸಾಧಕರು ತಮ್ಮ ಜೀವನದಲ್ಲಿ ಎದುರಾದ ವೈಫಲ್ಯಗಳನ್ನು ಮೀರಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ ಎಂದರು.ವೈದ್ಯ ವೃತ್ತಿಯು ಅತ್ಯಂತ ಜವಾಬ್ದಾರಿಯುತವಾಗಿದೆ. ಯೋಗ, ಧ್ಯಾನ ಹಾಗೂ ಏಕಾಗ್ರತೆ ಮೂಲಕ ಒತ್ತಡವನ್ನು ನಿಯಂತ್ರಿಸಿಕೊಳ್ಳಬೇಕು. ಅಗತ್ಯವಿದ್ದಷ್ಟೇ ಮೊಬೈಲ್ ಬಳಕೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರು ಹಾಗೂ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಫಾರ್ಮಕಾಲಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಎಲ್.ಡಿ. ಶ್ರೀನಿವಾಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಹಿಪೊಕ್ರೆಟಿಕ್ ಪ್ರಮಾಣವಚನ ಬೋಧಿಸಿದರು.
- - -
ದಾವಣಗೆರೆಯಲ್ಲಿ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ 61ನೇ ಪದವಿ ಪ್ರದಾನ ಸಮಾರಂಭ ನಡೆಯಿತು.