ಭಟ್ಕಳ: ತಾಲೂಕಿನ ವೆಂಕಟಾಪುರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜ್ಞಾನವಿಕಾಸ ಕಾರ್ಯಕ್ರಮದಡಿ ಅಂಗವಿಕಲರೊಬ್ಬರ ಬಿದ್ದು ಹೋಗುವ ಸ್ಥಿತಿಯಲ್ಲಿರುವ ಮನೆಯನ್ನು ಸಂಪೂರ್ಣ ರಿಪೇರಿ ನಡೆಸಿ, ನವೀಕರಣಗೊಳಿಸಿದ "ವಾತ್ಸಲ್ಯ ಮನೆ "ಯನ್ನು ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಹಸ್ತಾಂತರಿಸಿದರು.ನಂತರ ಮಾತನಾಡಿದ ಅವರು, ಉಳ್ಳವರು ನಿರ್ಗತಿಕರಿಗೆ, ಬಡವರಿಗೆ ನೆರವು ನೀಡಿ ಹಣದ ಸದ್ವಿನಿಯೋಗ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜ್ಞಾನವಿಕಾಸ ಮಹಿಳಾ ಸಂಘವು ಕಳೆದ ಹಲವಾರು ವರ್ಷಗಳಿಂದ ಬಡವರು. ನಿರ್ಗತಿಕರನ್ನು ಗುರುತಿಸಿ ಮನೆ ರಿಪೇರಿ, ಹೊಸ ಮನೆ ನಿರ್ಮಿಸಿಕೊಡುವುದು, ಮಾಶಾಸನ, ಮನೆಯ ಸಾಮಗ್ರಿಗಳನ್ನು ನೀಡುವುದನ್ನು ಮಾಡುತ್ತಾ ಬಂದಿದ್ದಾರೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಮನ್ವಯಧಿಕಾರಿ ವಿನೋದಾ ಬಾಲಚಂದ್ರ ಮಾತನಾಡಿ, ರಿಪೇರಿ ಮಾಡಿ ನವೀಕರಣಗೊಳಿಸಿ ಹಸ್ತಾಂತರ ಮಾಡುತ್ತಿರುವ ಐದನೇ ವಾತ್ಸಲ್ಯ ಮನೆ ಇದಾಗಿದೆ. ಮನೆಯು ಹಿಂದೆ ಸಂಪೂರ್ಣವಾಗಿ ಬಿದ್ದು ಹೋಗುವ ಸ್ಥಿತಿಯಲ್ಲಿದ್ದು, ಮಳೆಗಾಲದ ಸಮಯದಲ್ಲಿ ವಾಸ್ತವ್ಯ ಮಾಡಲು ಕಷ್ಟಕರ ಎನ್ನುವುದು ಅರಿತು ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಮನೆಯಲ್ಲಿ ಜಟ್ಟಮ್ಮ ನಾಯ್ಕ ತನ್ನ ಮೊಮ್ಮಕ್ಕಳಾದ ವಿಶೇಷಚೇತನನಾದ ಈಶ್ವರ ನಾಯ್ಕ, ಜ್ಯೋತಿ ನಾಯ್ಕ ಅವರನ್ನು ಸಲಹುತ್ತಿದ್ದು, ಮೊಮ್ಮಗ ಈಶ್ವರ ನಾಯ್ಕ ಸಂಪೂರ್ಣ ಅಂಗವೈಕಲ್ಯ ಹೊಂದಿದ್ದಾನೆ. ಮೊಮ್ಮಗಳು ಕೂಡ ಬುದ್ದಿಮಾಂದ್ಯತೆ ಹೊಂದಿದ್ದು ಅಜ್ಜಿ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಇದನ್ನು ಮನಗಂಡ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಂಪೂರ್ಣ ಮನೆ ರಿಪೇರಿ ಕಾರ್ಯ ನಡೆಸಿ ನವೀಕರಿಸಿದ ಮನೆ ಹಸ್ತಾಂತರ ಮಾಡಿದೆ. ಅದೇ ರೀತಿ ಬಡವರು, ನಿರ್ಗತಿಕರನ್ನು ಗ್ರಾಪಂ ಮಟ್ಟಗಳಲ್ಲಿ ಗುರುತಿಸಿ ವಾತ್ಯಲ್ಯ ಮನೆ, ಮನೆ ರಿಪೇರಿ ಕಾರ್ಯ ಆಹಾರ ಸಾಮಗ್ರಿಗಳ ಕಿಟ್, ಬಟ್ಟೆಗಳ ಕಿಟ್ ನೀಡುತ್ತಿದ್ದು, ಗ್ರಾಮಸ್ಥರು ಕೂಡ ಇಂತಹ ಸಾಮಾಜಿಕ ಕಾರ್ಯಕ್ಕೆ ಸಹಕಾರ ನೀಡುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಲತಾ ಬಂಗೇರ, ಒಕ್ಕೂಟದ ಅಧ್ಯಕ್ಷ ಚಂದ್ರು, ಸ್ವ ಸಹಾಯ ಸಂಘದ ಸದಸ್ಯರು, ಊರಿನ ಪ್ರಮುಖರು ಇದ್ದರು. ಸಂಘದ ಸಮನ್ವಯಧಿಕಾರಿ ವಿನೋದಾ ಬಾಲಚಂದ್ರ ನಿರೂಪಿಸಿದರು. ವಲಯ ಮೇಲ್ವಿಚಾರಕ ಗೋಕುಲ್ ವಂದಿಸಿದರು.
ಭಟ್ಕಳದ ವೆಂಕಟಾಪುರದಲ್ಲಿ ವಾತ್ಸಲ್ಯ ಮನೆಯನ್ನು ಹಸ್ತಾಂತರ ಮಾಡಿದರು.