ಕಾಂಗ್ರೆಸ್‌ನಿಂದ ಕರ್ನಾಟಕ ರಾವಣರಾಜ್ಯ: ಬಿ.ವೈ.ವಿಜಯೇಂದ್ರ

KannadaprabhaNewsNetwork |  
Published : Apr 09, 2025, 12:30 AM IST
ಬಿ.ವೈ.ವಿಜಯೇಂದ್ರ | Kannada Prabha

ಸಾರಾಂಶ

ಈ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಈ ಸರ್ಕಾರದ ಎಲ್ಲ ಭ್ರಷ್ಟಾಚಾರ ಜನ ವಿರೋಧಿ ನೀತಿ, ಬೆಲೆ ಏರಿಕೆಯನ್ನು ವಾಪಸ್ಸು ಪಡೆಯುವವರೆಗೂ ಹೋರಾಟ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೊಸಳೆ ಕಣ್ಣೀರು ಹಾಕಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ರಾಮರಾಜ್ಯ ಮಾಡುವ ಬದಲು ಬೆಲೆ ಏರಿಕೆ ಮಾಡುವ ಮೂಲಕ ರಾವಣ ರಾಜ್ಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದರು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆದ ಬಿಜೆಪಿ ಜನಾಕ್ರೋಶ ಯಾತ್ರೆಯಲ್ಲಿ ಮಾತನಾಡಿ, ಹಿಂದುಳಿದ ಸಮುದಾಯಗಳ ಮತಗಳಿಂದ ರಾಜಕೀಯವಾಗಿ ಬೆಳವಣಿಗೆ ಸಾಧಿಸಿ ಮುಖ್ಯಮಂತ್ರಿ ಸ್ಥಾನಕ್ಕೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಕೇವಲ ಅಲ್ಪಸಂಖ್ಯಾತರ ಜಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಅದು ಕಂಪನಿಗಳಿಗೆ ಮಾತ್ರ, ಜನಸಾಮಾನ್ಯರಿಗೆ ಅಲ್ಲ. ಆದರೆ ನೀವು ೫೦ ರಿಂದ ೭೦ ವಸ್ತುಗಳ ಬೆಲೆ ಏರಿಕೆ ಮಾಡಿದ್ದೀರಿ. ಈಗ ಯಾರಿಗೆ ಕಪಾಳಮೋಕ್ಷ ಮಾಡಬೇಕು ಎಂದು ತಿರುಗೇಟು ನೀಡಿದರು.

ಕೇಂದ್ರ ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದೆ. ನಿಮ್ಮ ಸರ್ಕಾರ ಎಲ್ಲ ವಸ್ತುಗಳ ಮೇಲೂ ತೆರಿಗೆ ಹಾಕಿ ಸುಲಿಗೆ ಮಾಡಲು ಹೊರಟಿದೆ. ನಿಮ್ಮ ಈ ಕಾರ್ಯವನ್ನು ಜನತೆ ಹಾದಿ- ಬೀದಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ. ಮುಂದೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಬಿ.ಎಸ್. ಯಡಿಯೂರಪ್ಪ ಅವರು ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಮಂಡಿಸಿದ್ದರು. ಆದರೆ ನೀವು ರೈತರ ಜೊತೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ್ದೀರಿ. ರಾತ್ರಿ ೧೨ ಅಥವಾ ೨ ಗಂಟೆಗೆ ಪಂಪ್‌ಸೆಟ್‌ಗಳಿಗೆ ಕರೆಂಟ್ ಕೊಟ್ಟು ಹೊಲದಲ್ಲಿ ಸರಿರಾತ್ರಿ ಹೊತ್ತಿನಲ್ಲಿ ರೈತ ನಿಲ್ಲುವಂತೆ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಹಿಂದೂಗಳ ಅಂಗಡಿಗಳಿಗೆ ನುಗ್ಗಿ ಬೆಂಕಿ ಹಚ್ಚುತ್ತಾರೆ. ಅಂತಹ ಕಿಡಿಗೇಡಿಗಳನ್ನು ಜೈಲಿಗೆ ಕಳುಹಿಸದೆ ಅಮಾಯಕರ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಾರೆ. ವಿ.ಸಿ.ನಾಲೆ ದುರಸ್ತಿ ನೆಪದಲ್ಲಿ ಕಾಂಗ್ರೆಸ್ ಪುಡಾರಿಗಳು ಮನೆ ಕಟ್ಟಿಕೊಂಡಿದ್ದಾರೆ. ದುರಸ್ತಿ ಮಾತ್ರ ನಡೆದಿಲ್ಲ. ಅಭಿವೃದ್ಧಿ ಇಲ್ಲ, ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಅವರಿಗೆ ನ್ಯಾಯಾಲಯದಿಂದ ಜಾಮೀನು ಕೊಡಿಸಿದರೂ ಪೊಲೀಸರನ್ನು ಬಿಟ್ಟು ದೌರ್ಜನ್ಯ ನಡೆಸಿದ್ದರ ಫಲವಾಗಿ ನಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಇದಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಯಾತ್ರೆ ಇಲ್ಲಿಗೇ ನಿಲ್ಲುವುದಿಲ್ಲ. ಈ ಸರ್ಕಾರದ ಎಲ್ಲ ಭ್ರಷ್ಟಾಚಾರ ಜನ ವಿರೋಧಿ ನೀತಿ, ಬೆಲೆ ಏರಿಕೆಯನ್ನು ವಾಪಸ್ಸು ಪಡೆಯುವವರೆಗೂ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ