ಡಿ.ಮಂಜುನಾಥ್‌ರಿಂದ ಮಹಿಳಾ ಪ್ರತಿನಿಧಿಗೆ ಅವಮಾನ

KannadaprabhaNewsNetwork | Published : Apr 9, 2025 12:30 AM

ಸಾರಾಂಶ

ಶಿವಮೊಗ್ಗ: ಡಿ.ಮಂಜುನಾಥ್ ಅವರು ಸಾಹಿತ್ಯ ಪರಿಷತ್ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನಿಂದ ರಾಜ್ಯದ ಮಹಿಳಾ ಪ್ರತಿನಿಧಿಯಾಗಿ ನನ್ನನ್ನು ನಾಮ ನಿರ್ದೇಶನ ಮಾಡಲಾಗಿದ್ದರೂ, ಕಸಾಪದಿಂದ ಆಯೋಜಿಸಿದ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ನನ್ನನ್ನು ಅವಮಾನಿಸಿದ್ದಾರೆ ಎಂದು ಸಾಹಿತ್ಯ ಪರಿಷತ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀರಂಜನಿ ದತ್ತಾತ್ರಿ ದೂರಿದರು.

ಶಿವಮೊಗ್ಗ: ಡಿ.ಮಂಜುನಾಥ್ ಅವರು ಸಾಹಿತ್ಯ ಪರಿಷತ್ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‍ನಿಂದ ರಾಜ್ಯದ ಮಹಿಳಾ ಪ್ರತಿನಿಧಿಯಾಗಿ ನನ್ನನ್ನು ನಾಮ ನಿರ್ದೇಶನ ಮಾಡಲಾಗಿದ್ದರೂ, ಕಸಾಪದಿಂದ ಆಯೋಜಿಸಿದ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ನನ್ನನ್ನು ಅವಮಾನಿಸಿದ್ದಾರೆ ಎಂದು ಸಾಹಿತ್ಯ ಪರಿಷತ್‍ನ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀರಂಜನಿ ದತ್ತಾತ್ರಿ ದೂರಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಪರಿಷತ್‌ನ ಇತಿಹಾಸದಲ್ಲೇ ಪ್ರಪ್ರಥಮವಾಗಿ ಶಿವಮೊಗ್ಗ ಜಿಲ್ಲೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ನಿಂದ ರಾಜ್ಯದ ಮಹಿಳಾ ಪ್ರತಿನಿಧಿಯಾಗಿ ನನ್ನನ್ನು ನಾಮ ನಿರ್ದೇಶನ ಮಾಡಲಾಗಿದೆ ಎಂದು ತಿಳಿಸಿದರು.

ತಮ್ಮನ್ನು ರಾಜ್ಯಾಧ್ಯಕ್ಷರು ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜನಪದ ಇವುಗಳ ರಕ್ಷಣೆ ಮತ್ತು ಪ್ರಸಾರ ಹಾಗೂ ಅಭಿವೃದ್ಧಿಯ ಜವಾಬ್ದಾರಿಯನ್ನು ನೀಡಿದ್ದಾರೆ. ಈ ವಿಷಯವನ್ನು ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರಿಗೂ ತಿಳಿಸಲಾಗಿದೆ. ಮುಂದಿನ ನಿಮ್ಮ ಜಿಲ್ಲಾ ಕಸಾಪ ಚಟುವಟಿಕೆಗಳಲ್ಲಿ ಇವರನ್ನು ತೊಡಗಿಸಿಕೊಳ್ಳಿ ಎಂದು ಅವರಿಗೆ ನಿರ್ದೇಶನ ನೀಡಿದರೂ, ಡಿ.ಮಂಜುನಾಥ್ ಅವರು ತಾವು ಕಸಾಪದಿಂದ ಆಯೋಜಿಸಿದ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡದೇ ನನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಾಧ್ಯಕ್ಷರು ನನಗೆ ತೇಜೋವಧೆ ಮಾಡಿದ್ದಾರೆ, ಅಲಕ್ಷ್ಯ ಮಾಡಿದ್ದಾರೆ ಎನ್ನುವ ಶಿವಮೊಗ್ಗ ಜಿಲ್ಲಾಧ್ಯಕ್ಷರು ತಮ್ಮ ಈ ನಡೆಯ ಮೂಲಕ ಮಹಿಳಾ ಪ್ರಾತಿನಿಧ್ಯಕ್ಕೆ ಅಗೌರವ ತೋರಿಸಿದ್ದಾರೆ. ಭದ್ರಾವತಿಯಲ್ಲಿ ಕನ್ನಡದ ರಥಯಾತ್ರೆ ಬಂದಾಗ ವೇದಿಕೆಯಲ್ಲಿ ನಿರೂಪಕರು ನನ್ನನ್ನು ಕರೆದಾಗ ಅವರ ಹೆಸರು ಯಾಕೆ ಹೇಳಿದಿರಿ ಎಂದು ವೇದಿಕೆಯಲ್ಲೇ ನಿರೂಪಕಿಯನ್ನು ತರಾಟೆಗೆ ತೆಗೆದುಕೊಂಡು, ನನ್ನನ್ನು ಅವಮಾನ ಮಾಡಿದರು. ಇದು ಇಡೀ ಮಹಿಳಾ ಪ್ರಾತಿನಿಧ್ಯಕ್ಕೆ ಅವಮಾನ ಮಾಡಿದಂತೆ, ತಮ್ಮ ಮುಂದೆ ಬೇರೆ ಯಾರೂ ಬೆಳೆಯಬಾರದು ಎಂಬ ಭಾವನೆ ಅವರದ್ದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಿ.ಮಂಜುನಾಥ್ ಅವರಿಗೆ ನೀಡಿರುವ ಶೋಕಾಸ್ ನೋಟಿಸ್‍ನಲ್ಲಿ ಇರುವ ಹಲವು ವಿಚಾರಗಳು ಇನ್ನೂ ನಿರ್ಧಾರವಾಗಿಲ್ಲ. ಕೆಲವು ನಿಬಂಧನೆಗಳು ಕೂಡ ತಿದ್ದುಪಡಿ, ಮರುತಿದ್ದುಪಡಿ, ಮರುಪರಿಶೀಲನೆಯ ಅಂತದಲ್ಲಿಯೇ ಇವೆ. ಹೀಗಿದ್ದಾಗ್ಯೂ ಡಿ.ಮಂಜುನಾಥ್ ಅವರು ಕೇಂದ್ರ ಸಾಹಿತ್ಯ ಪರಿಷತ್ ವಿರುದ್ಧ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ ಎಂದು ಆಪಾದಿಸಿದರು.

ಕಸಾಪ ಹಣದಿಂದ ಆಯೋಜಿಸಿದ್ದ ಸುಮಾರು 41 ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ಸಾಹಿತ್ಯ ಪರಿಷತ್‍ನ ಹೆಸರನ್ನು ಉಲ್ಲೇಖಿಸದೇ ತಮ್ಮ ಸ್ವಂತ ಸಂಘಟನೆಗಳ ಹೆಸರಿಗೆ ಪ್ರಾಮುಖ್ಯತೆ ನೀಡಿ ಪರಿಷತ್‍ಗೆ ಅವಮಾನ ಮಾಡಿದ್ದಾರೆ. ಅಲ್ಲದೇ ಪರಿಷತ್‍ನ ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ದೂರಿದರು.

ಪರಿಷತ್‍ನ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಕಾರ್ಯಕ್ರಮ ಸಂಘಟನೆ ಮಾಡಿ ಎಂದು ಡಿ.ಮಂಜುನಾಥ್ ಅವರಿಗೆ ಪರಿಷತ್‍ನ ಜಿಲ್ಲಾಧ್ಯಕ್ಷರನ್ನಾಗಿ ಮಾಡಿದರೆ ಅವರು ಸಾಹಿತ್ಯ ಮನಸ್ಸುಗಳನ್ನೇ ಇಬ್ಭಾಗ ಮಾಡಿದರು.

ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ನಂತರವೂ ಮಂಜುನಾಥ್ ಅವರು ಪರಿಷತ್‍ನ ಜಿಲ್ಲಾಧ್ಯಕ್ಷರಾಗಿ ಸರ್ಕಾರದಿಂದ ಬಂದ 1 ಕೋಟಿ ರು. ಅನ್ನು ಕಳ್ಳ ಮಾರ್ಗದಲ್ಲಿ ತೆಗೆದುಕೊಂಡಿದ್ದಾರೆ. ಯಾವುದೇ ಹಣಕಾಸಿನ ವ್ಯವಹಾರಕ್ಕೆ ಪರಿಷತ್‍ನ ಆಡಳಿತಾತ್ಮಕ ಅನುಮೋದನೆ ಬೇಕು. ಅದು ಯಾವುದು ಇಲ್ಲದೆ, ಡಿ.ಮಂಜುನಾಥ್ ಅವರು ಹಣಕಾಸಿನ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭದ್ರಾವತಿ ತಾಲೂಕು ನಿಕಟಪೂರ್ವ ಕಸಾಪ ಅಧ್ಯಕ್ಷ ಡಾ.ಅಪೇಕ್ಷಾ ಮಂಜುನಾಥ್, ಹಿತಕರ ಜೈನ್, ಎಚ್.ಎನ್.ಮಹಾರುದ್ರ, ಮಧುಮತಿ, ಅಗಡಿ ಜಗದೀಶ್ ಮತ್ತಿತರರು ಇದ್ದರು.

Share this article