ಇಂಗ್ಲೀಷ್ ಕಲಿತರೆ ಮನೆಬಾಲಿಗೆ ಬಂದು ಉದ್ಯೋಗ ಕೊಡುವುದಿಲ್ಲ: ಪುರುಷೋತ್ತಮ ಬಿಳಿಮಲೆ

KannadaprabhaNewsNetwork | Published : Aug 7, 2024 1:08 AM

ಸಾರಾಂಶ

''ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ'' ಹೆಸರಿನಲ್ಲಿ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತ ಪರಿಷತ್ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಅನುಕರಣೀಯ.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಶೇಕಡ 50ಕ್ಕಿಂತಲೂ ಹೆಚ್ಚು ಪಾಲಕರಲ್ಲಿ ಇಂಗ್ಲೀಷ್ ವ್ಯಾಮೋಹವಿದೆ. ಇಂಗ್ಲೀಷ್ ಕಲಿತರೆ ಮನೆಗೆ ಬಂದು ಯಾರೂ ಉದ್ಯೋಗ ಕೊಡುವುದಿಲ್ಲ. ಶೇ.47ರಷ್ಟು ಇಂಗ್ಲೀಷ್ ಕಲಿತವರಿಗೆ ಉದ್ಯೋಗವೇ ಇಲ್ಲ. ಉದ್ಯೋಗ ಬೇಕೆಂದರೆ ಪ್ರತಿಭೆ, ಕೌಶಲ್ಯ ಬೇಕು. ಮಕ್ಕಳಿಗೆ ಇದನ್ನು ಕಲಿಸುವುದರತ್ತ ಎಲ್ಲರ ಗಮನ ಹರಿಸಬೇಕು. ಆದರೆ ಇದರತ್ತ ಯಾರಿಗೂ ಲಕ್ಷ್ಯವೇ ಇಲ್ಲದಂತಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.

ಕನ್ನಡ ಜಾಗೃತ ಪರಿಷತ್‌ ಭವನದಲ್ಲಿ ''''ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ'''' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಒಂದು ಸಾವಿರ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಿದ್ದರು. ಈಗ ಕೂಡ ಇಂಗ್ಲೀಷ್ ಶಾಲೆ ತೆರೆಯಲು ಮನವಿ ಸಲ್ಲಿಸಲಾಗಿದೆ. ಅಧಿಕಾರಿಗಳಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಿದೆ ಎಂದು ಹೇಳಿದರು.

''''ಆಯ್ಕೆ ಮತ್ತು ಅವಕಾಶ ವಂಚಿತರಿಗೆ ಒತ್ತಾಸೆ'''' ಹೆಸರಿನಲ್ಲಿ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಅಂಕ ಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತ ಪರಿಷತ್ ವತಿಯಿಂದ ನಗದು ಪುರಸ್ಕಾರ ನೀಡಿ ಗೌರವಿಸುತ್ತಿರುವುದು ಅನುಕರಣೀಯ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಎ.ಒ.ಆವಲಮೂರ್ತಿ ಮಾತನಾಡಿ, ಇಂಗ್ಲೀಷ್‌ನಿಂದ ಮಾತ್ರ ಬದುಕು ಸಮೃದ್ಧಿ ಎಂಬುದು ದೊಡ್ಡ ಸುಳ್ಳು. ಆದರೆ ನಾವು ಅದನ್ನೇ ನಿಜವೆಂದುಕೊಂಡಿದ್ದೇವೆ. ನಮ್ಮ ಶಾಲೆಗಳಲ್ಲಿ ಬಾಯಿ ಪಾಠದ ಸಂಸ್ಕೃತಿ ತೊಲಗಬೇಕು ಎಂದು ಹೇಳಿದರು.

ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಮಾತನಾಡಿ, ದೊಡ್ಡಬಳ್ಳಾಪುರ ಎರಡನೇ ಧಾರವಾಡ. 1969ರಲ್ಲೇ ಕನ್ನಡ ಭುವನೇಶ್ವರಿ ಸಂಘ ಸ್ಥಾಪನೆ, 1985ರಲ್ಲಿ ಕನ್ನಡ ಜಾಗೃತ ಪರಿಷತ್ ಉದಯವಾಯಿತು. ಕನ್ನಡ ಜನಪರ ಸಂಸ್ಕೃತಿ, ಹೋರಾಟಗಳು ಆರಂಭವಾದವು. ಸರೋಜಿನಿ ಮಹಿಷಿ ಅವರು ದೊಡ್ಡಬಳ್ಳಾಪುರಕ್ಕೆ ಬಂದು ಈ ಸಂಸ್ಥೆಗಳಿಂದ ತಮ್ಮ ವರದಿಗೆ ಪೂರಕ ಸಂಗತಿಗಳನ್ನು ಸಂಗ್ರಹಿಸಿಕೊಂಡರು ಎಂದು ಸ್ಮರಿಸಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕ ಎಚ್‌.ಎಸ್.ನಾರಪ್ಪ, ಮೇಜರ್ ಎಸ್.ಮಹಾಬಲೇಶ್ವರ್, ರುಮಾಲೆ ನಾಗರಾಜ್, ನಗರ ಸಭಾ ಸದಸ್ಯ ತ.ನ.ಪ್ರಭುದೇವ್, ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ಕನ್ನಡ ಜಾಗೃತ ಪರಿಷತ್‌ ಟ್ರಸ್ಟ್‌ನ ಗೌರವ ಅಧ್ಯಕ್ಷೆ ಕೆ.ಸುಲೋಚನಮ್ಮ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್‌ನಾಯಕ್, ಜಾಗೃತ ಪರಿಷತ್ ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ ಇದ್ದರು.

Share this article