ಬ್ಯಾಡಗಿ: ಪ್ರಸ್ತುತ ಕಾಲಘಟ್ಟದಲ್ಲಿ ಯಾವುದೇ ಧಾರ್ಮಿಕ ಆಚರಣೆ ಮತ್ತು ನಂಬಿಕೆಗಳನ್ನು ಉಳಿಸಿಕೊಳ್ಳಲು ಹಾಗೂ ನಮ್ಮ ಇಷ್ಟಾರ್ಥ ಸಿದ್ಧಿಗಳಿಗಾಗಿ ಜಾತ್ರೆ ಸೇರಿದಂತೆ ಹಬ್ಬ ಹರಿದಿನ ನಡೆಸಬೇಕಾಗುತ್ತದೆ. ಡಾಂಬಿಕತನ ಬಿಟ್ಟು ಶ್ರದ್ಧಾಭಕ್ತಿಯಿಂದ ದೇವತೆಗಳ ಮೊರೆ ಹೋದಲ್ಲಿ ಖಂಡಿತವಾಗಿ ಫಲಪ್ರಾಪ್ತಿಯಾಗುತ್ತದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ದುರುದ್ದೇಶದ ಆಚರಣೆಗಳಿಗೆ ಕಡಿವಾಣ: ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಅಧ್ಯಕ್ಷ ಡಾ. ಬಾಲಚಂದ್ರಗೌಡ ಪಾಟೀಲ ಮಾತನಾಡಿ, ದ್ಯಾಮವ್ವದೇವಿ ಎಲ್ಲ ಆಚರಣೆಗಳಲ್ಲಿ ತನ್ನನ್ನು ತಾನು ಗುರ್ತಿಸಿಕೊಳ್ಳುವ ಮೂಲಕ ನಿರಂತರ ಸಂಪರ್ಕದೊಂದಿಗೆ ಮನುಷ್ಯ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕರಲ್ಲಿ ಧಾರ್ಮಿಕ ನಂಬಿಕೆಗಳನ್ನು ಮೂಡಿಸುವುದೇ ಕಷ್ಟಸಾಧ್ಯವಾಗಿದೆ ಎಂದರು.
ಬದಲಾವಣೆಗೆ ನಾವೇ ಮೊದಲ ಮೆಟ್ಟಿಲಾಗೋಣ: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಗ್ರಾಮದೇವತೆ ಜಾತ್ರೆ ಎಂದರೆ ಜನರಿಗೆ ಸುಖ, ಶಾಂತಿ ನೆಮ್ಮದಿಗೆ ಆಚರಿಸಿಕೊಂಡು ಬರಲಾಗುತ್ತಿರುವ ಆಧ್ಯಾತ್ಮಿಕ ಸಂಪ್ರದಾಯಗಳಲ್ಲಿ ಒಂದಾಗಿದೆ. ಆದರೆ ಇತ್ತೀಚೆಗೆ ಜಾತ್ರೆಗಳಲ್ಲಿ ಡಂಬಾಚರಣೆ ಹೆಚ್ಚಿದೆ. ಆದರೆ ನಮ್ಮೂರ ಜಾತ್ರೆಯಲ್ಲಿ ಇವುಗಳಿಗೆ ಆಸ್ಪದ ನೀಡದಿರುವುದು ಉತ್ತಮ ನಿರ್ಧಾರ. ಇದರಿಂದ ಕೆಲವರಿಗೆ ನೋವಾಗಿರುವುದು ಸಹಜ. ಆದರೆ ಬದಲಾವಣೆಗೆ ನಾವೇ ಮೊದಲನೆ ಮೆಟ್ಟಿಲಾಗೋಣ ಎಂದರು.ಮುಪ್ಪಿನೇಶ್ವರನ ಮರೆಯದಿರಿ: ಮುಪ್ಪಿನೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ಗ್ರಾಮದೇವತೆ ಜಾತ್ರಾ ಸಮಿತಿ ಕಳೆದೊಂದು ತಿಂಗಳಿಂದ ಹಗಲಿರುಳು ಶ್ರಮಿಸುತ್ತಿದೆ. ಪಟ್ಟಣದ ಹಿತದೃಷ್ಟಿಯಿಂದ ಗ್ರಾಮದೇವತೆ ಜಾತ್ರೆ ಎಷ್ಟು ಮುಖ್ಯವೋ ಪಟ್ಟಣದಲ್ಲಿನ ಮುಪ್ಪಿನೇಶ್ವರನ ಆಶೀರ್ವಾದ ಸಹ ಅಷ್ಟೇ ಮುಖ್ಯ. ಯಾವುದೇ ಧಾರ್ಮಿಕ ಕೆಲಸ ಕಾರ್ಯಗಳಿಗೂ ಮುನ್ನ ಮುಪ್ಪಿನೇಶ್ವರ ಗುರುಗಳನ್ನು ಮರೆಯದೇ ನೆನೆಯುವ ಕಾರ್ಯವಾಗಲಿ ಎಂದರು.