ರಾಮನಗರ: ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸಿ, ಉಮೇದುವಾರಿಕೆ ವಾಪಸ್ ಪಡೆಯಲು ಹಣ ಪಡೆದುಕೊಂಡಿದ್ದೇನೆಂದು ಅಪಪ್ರಚಾರ ಮಾಡಲಾಗುತ್ತಿದೆ. ನಾನು ಹಣ ಪಡೆದಿರುವುದನ್ನು ಯಾರಾದರು ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ ಎಂದು ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ ಸವಾಲು ಹಾಕಿದರು.
ನಾನು ಕಳೆದ 31 ವರ್ಷಗಳಿಂದ ರಾಮನಗರದ ರಾಜಕಾರಣದಲ್ಲಿ ಸಕ್ರಿಯವಾಗಿ, ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಬರುತ್ತಿದ್ದೇನೆ. ರಾಮನಗರ ತಾಪಂ ಸದಸ್ಯನಾಗಿ, ಪ್ರಭಾರ ಅಧ್ಯಕ್ಷನಾಗಿ, ಎರಡು ಭಾರಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಸಮಾಜ ಸೇವೆ ಜೊತೆಗೆ ಬಡವರು, ಶೋಷಿತರ ಪರವಾಗಿ, ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ತಲುಪಿಸಲು ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಇತ್ತೀಚೆಗೆ ನಡೆದ ಬಿಡಿಸಿಸಿ ಬ್ಯಾಂಕ್ ಚುನಾವಣೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದ್ದು, ನನ್ನ ಸ್ನೇಹಿತರು, ಕೆಲವು ಹಿರಿಯರ ಜೊತೆ ಮಾತನಾಡಿ ಸಾಧಕ ಬಾಧಕ ಚರ್ಚಿಸಿ ನಾನು ನನ್ನ ನಾಮಪತ್ರ ವಾಪಸ್ ಪಡೆದುಕೊಂಡಿದ್ದೇನೆ. ಈ ವಿಚಾರ ಬಳಸಿಕೊಂಡು ಕೆಲವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದು, ನನ್ನ ತೇಜೋವಧೆಗೆ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ ಎಂದು ದೂರಿದರು.ನಾನು ಅಭ್ಯರ್ಥಿಯಿಂದ ಹಣದ ಆಮಿಷಕ್ಕೆ ಒಳಗಾಗುವ ವ್ಯಕ್ತಿತ್ವ ನನ್ನದಲ್ಲ. ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿ, ನನ್ನ ಚಾರಿತ್ರ ಹರಣ ಮಾಡಲಾಗುತ್ತಿದೆ. ನಾನು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ತಾಯಿಯ ಮುಂದೆ ಬಂದು ಪ್ರಮಾಣ ಮಾಡಿ, ಯಾವುದೇ ಹಣ ಪಡೆದಿಲ್ಲ ಎಂದು ಹೇಳಲು ಸಿದ್ದನಿದ್ದೇನೆ. ನನ್ನ ವಿರುದ್ದ ಆರೋಪ ಮಾಡುತ್ತಿರುವರು ದೇವಾಲಯಕ್ಕೆ ಬಂದು ಸತ್ಯ ಮಾಡಲಿ ಎಂದು ಸವಾಲು ಹಾಕಿದರು.
ನಾನು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ವಿಚಾರದಲ್ಲಿ ತಾಲೂಕಿನ ಕೆಲವು ಸೊಸೈಟಿ ಗಳ ನಿರ್ದೇಶಕರನ್ನು ಆಯ್ಕೆ ಮಾಡುವಾಗ ನನ್ನ ಇತಿಮಿತಿಯಲ್ಲಿ ಸಾಕಷ್ಟು ಶ್ರಮಿಸಿದ್ದೇನೆ. ಚುನಾವಣೆ ವಿಚಾರದಲ್ಲಿ ನನ್ನ ಶ್ರಮವೂ ಸಾಕಷ್ಟಿದೆ. ನನ್ನ ರಾಜಕೀಯ ಕ್ಷೇತ್ರದಲ್ಲಿ ಯಾವುದೇ ಕಪ್ಪುಚುಕ್ಕಿ ಇಲ್ಲ, ಯಾವುದೇ ಕಳಪೆ ಕಾಮಗಾರಿ ಮಾಡಿ ಹಣ ಲಪಟಾಸಿಲ್ಲ, ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಬಡವರ ಹಣ ಹೊಡೆದಿಲ್ಲ, ನಂಬಿಕೆ ದ್ರೋಹ ಮಾಡಿಲ್ಲ, ನನ್ನ ಜೀವಮಾನದಲ್ಲಿ ಈ ಕೆಲಸ ಮಾಡಿಲ್ಲ, ಮರ್ಯಾದೆಯಿಂದ ಬದುಕಿದ್ದೇನೆ. ನನ್ನ ಹಿಂದೆ ಮಾತನಾಡುವವರು ನನ್ನ ಎದುರಿಗೆ ಬಂದು ಮಾತನಾಡಿ, ಸಾಕ್ಷಿ ಸಮೇತ ಸಾಬೀತು ಮಾಡಿದರೆ ನಾನೇ ತಲೆಬಾಗುತ್ತೇನೆ ಎಂದು ಹೇಳಿದರು.ಕಳೆದ ಐದು ವರ್ಷದ ಹಿಂದೆ ಇದೇ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬೇರೆಯವರನ್ನು ನಿಲ್ಲಿಸಿ ನಾನು ಸಹ ಚುನಾವಣಾ ವೆಚ್ಚ ಭರಿಸಿದ್ದೇನೆ. ವಾಸ್ತವಾಂಶ ಹೀಗಿದ್ದರೂ ಆ ಸಮಯದಲ್ಲೂ ಸಹ ನಾನೇ ಹಣ ಪಡೆದುಕೊಂಡಿದ್ದಾಗಿ ಅಪ ಪ್ರಚಾರ ಮಾಡಿದ್ದರು. ರಾಜಕೀಯದಲ್ಲಿ ನನ್ನ ಅಸ್ತಿತ್ವ ಉಳಿಸಿಕೊಳ್ಳಲು ನನ್ನ ಆಸ್ತಿ, ಹಣ, ಆಯಸ್ಸು ಕಳೆದುಕೊಂಡಿದ್ದೇನೆಯೇ ವಿನಃ, ಕುಡಿತ, ಮೋಜು, ಜೂಜಿಗೆ ಹಣ ಕಳೆದುಕೊಂಡಿಲ್ಲ. ಹಣದ ಆಮಿಷಕ್ಕೆ ಒಳಗಾಗಿ ವಾಪಸ್ ಪಡೆದುಕೊಂಡರು ಎಂದು ಆರೋಪ ಹೊರೆಸುತ್ತಿರುವವರು ನನ್ನಂತೆಯೇ ಧೈರ್ಯದಿಂದ ಮಾಧ್ಯಮಗಳ ಎದುರು ಮಾತನಾಡಲಿ ಎಂದು ಅಶ್ವತ್ಥ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ಶಿವಲಿಂಗಯ್ಯ, ಆರ್.ಪಾಂಡುರಂಗ, ಅಂಕನಹಳ್ಳಿ ವಿಎಸ್ಎಸ್ ಎನ್ ಅಧ್ಯಕ್ಷ ವರದರಾಜು, ಕೈಲಾಂಚ ವಿಎಸ್ಎಸ್ಏನ್ ಅಧ್ಯಕ್ಷರಾದ ವಡ್ಡರಳ್ಳಿ ವೆಂಕಟೇಶ್, ಮಾಜಿ ಅಧ್ಯಕ್ಷರಾದ ಶಿವಕುಮಾರ್, ಮಹಾದೇವ್, ನಿರ್ದೇಶಕರಾದ ಶಿವರಾಜು, ಸ್ವಾಮಿ, ಮುಖಂಡರಾದ ಕರಿಯಪ್ಪ, ಭದ್ರಗಿರಿ ಗೌಡ, ರಾಜಣ್ಣ, ಸಿದ್ದರಾಮು, ಬಸವರಾಜು, ನಾಗಹಳ್ಳಿ ಕೆಂಪರಾಜು ಇತರರಿದ್ದರು.15ಕೆಆರ್ ಎಂಎನ್ 1.ಜೆಪಿಜಿ
ರಾಮನಗರ ತಾಲೂಕಿನ ಅಂಕನಹಳ್ಳಿ ಸೊಸೈಟಿಯಲ್ಲಿ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿ.ಅಶ್ವತ್ಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗ್ರಾಪಂ ಮಾಜಿ ಅಧ್ಯಕ್ಷರಾದ ಕೆ.ಶಿವಲಿಂಗಯ್ಯ, ಆರ್.ಪಾಂಡುರಂಗ, ಅಂಕನಹಳ್ಳಿ ವಿಎಸ್ಎಸ್ ಎನ್ ಅಧ್ಯಕ್ಷ ವರದರಾಜು ಇತರರಿದ್ದರು.