ಕನ್ನಡಪ್ರಭ ವಾರ್ತೆ ತುಮಕೂರುದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಮೂಲಭೂತ ಹಕ್ಕುಗಳ ಅರಿವಿನ ಜೊತೆಗೆ ಸಂವಿಧಾನಬದ್ಧ ಕರ್ತವ್ಯಗಳನ್ನೂ ತಿಳಿದು ಅವುಗಳನ್ನು ಪಾಲಿಸುವುದು ಅತ್ಯಗತ್ಯ ಎಂದು ಕರ್ನಾಟಕ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಹೇಳಿದರು.ತಿಪಟೂರಿನ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕುಗಳಿಗೆ ಸಂಬಂದಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ದಾಖಲಾಗಿ ಬಾಕಿಯಿರುವ ಪ್ರಕರಣಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಜನರು ಕರ್ತವ್ಯಗಳನ್ನು ಮರೆತು ಕೇವಲ ಹಕ್ಕುಗಳನ್ನೇ ಬೇಡುವ ಪ್ರವೃತ್ತಿ ಹೆಚ್ಚುತ್ತಿದೆ, ಹಕ್ಕುಗಳ ಜೊತೆಗೆ ಕರ್ತವ್ಯಗಳ ಅರಿವು ಕೂಡ ಬಹಳ ಮುಖ್ಯ ಎಂದು ಹೇಳಿದರು.
ದೇಶದ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಾಲ್ಕು ಪ್ರಮುಖ ಶಾಸನಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾ ರಂಗ ಸ್ತಂಭಗಳಲ್ಲಿ ಕೆಲವು ಕ್ಷೇತ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಕೆಲವೆಡೆ ಜನರ ಹಿತಕ್ಕಾಗಿ ಜವಾಬ್ದಾರಿಗಳು ಪೂರ್ಣ ಪ್ರಮಾಣದಲ್ಲಿ ಪಾಲನೆಯಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನ್ಯಾಯಾಂಗ ಮತ್ತು ಪತ್ರಿಕಾ ರಂಗಕ್ಕೆ ಪ್ರಶಂಸೆ ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ನ್ಯಾಯಾಂಗ ಮತ್ತು ಪತ್ರಿಕಾ ರಂಗ ಮುಂಚೂಣಿಯಲ್ಲಿವೆ. ದೇಶದಲ್ಲಿ ನಡೆಯುವ ಅನ್ಯಾಯ ಹಾಗೂ ಅಕ್ರಮಗಳ ವಿರುದ್ಧ ಈ ಎರಡು ಕ್ಷೇತ್ರಗಳು ಧ್ವನಿ ಎತ್ತುತ್ತಿರುವುದರಿಂದಲೇ ಪ್ರಜಾಪ್ರಭುತ್ವ ಜೀವಂತವಾಗಿದೆ ಎಂದು ಶ್ಲಾಘಿಸಿದ್ದರು.
ಕರ್ನಾಟಕ ಲೋಕಾಯುಕ್ತವು ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಬಲಿಷ್ಠ ಸಂಸ್ಥೆಯಾಗಿದೆ, ತಪ್ಪು ಮಾಡಿದವರು ಯಾರೇ ಆಗಿರಲಿ ಶಿಕ್ಷೆ ಖಚಿತ ಹಾಗಾಗಿ ಸಾರ್ವಜನಿಕರು ಸುಳ್ಳು ಪ್ರಕರಣ ದಾಖಲು ಮಾಡದೇ ನೈಜತೆ ಇರುವ ಪ್ರಕರಣಗಳು ಮಾತ್ರ ಲೋಕಾಯುಕ್ತ ಹಂತದಲ್ಲಿ ದಾಖಲಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಕರ್ನಾಟಕ ಲೋಕಾಯುಕ್ತ ಉಪನಿಬಂಧಕ ಅರವಿಂದ ಎನ್.ವಿ. ತುಮಕೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಲಕ್ಷ್ಮೀ ನಾರಾಯಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ತಹಸೀಲ್ದಾರ್ ಜಿ.ವಿ.ಮೋಹನ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.