ಹಗುರ ಮಾತಾಡಿದ್ರೆ ಸುಮ್ಮನಿರಲ್ಲ: ರೇಣುಕಾಚಾರ್ಯ

KannadaprabhaNewsNetwork |  
Published : Nov 05, 2023, 01:16 AM IST
4ಕೆಡಿವಿಜಿ6-ಹೊನ್ನಾಳಿಯಲ್ಲಿ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಬರ ಅಧ್ಯಯನ ಪ್ರವಾಸದ ವೇಳೆ ಕೆಂಚಿಕೊಪ್ಪ, ಆರುಂಡಿ ಗ್ರಾಮದಲ್ಲಿ ಬೆಳೆ ಒಣಗಿದ್ದ ಹೊಲಗಳಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ, ರೈತರ ಅಹವಾಲು ಆಲಿಸಿದರು.................4ಕೆಡಿವಿಜಿ7-ಹೊನ್ನಾಳಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. | Kannada Prabha

ಸಾರಾಂಶ

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಮಾಜಿ ಸಚಿವ ತಿರುಗೇಟು । ಕಾಂಗ್ರೆಸ್‌ ಸೇರುತ್ತೇನೆಂದು ಹೇಳಿಲ್ಲ, ಅರ್ಜಿಯೂ ಹಾಕಿಲ್ಲ

ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಮಾಜಿ ಸಚಿವ ತಿರುಗೇಟು । ಕಾಂಗ್ರೆಸ್‌ ಸೇರುತ್ತೇನೆಂದು ಹೇಳೂ ಇಲ್ಲ, ಅರ್ಜಿ ಹಾಕಿಲ್ಲ

ಕನ್ನಡಪ್ರಭ ವಾರ್ತೆ ದಾವಣಗೆರೆ

ನನ್ನ ಬಗ್ಗೆ ಪದೇ ಪದೇ ಹಗುರ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಮ್ಮ ರಾಜಕೀಯ ಎದುರಾಳಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಗುಟುರು ಹಾಕಿದ್ದಾರೆ.

ಹೊನ್ನಾಳಿ ಕ್ಷೇತ್ರದ ವಿವಿಧೆಡೆ ಬೆಳೆ ಹಾನಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ರೇಣುಕಾಚಾರ್ಯ ಕಾಂಗ್ರೆಸ್ ಸೇರಲು ತನ್ನ ವಿರೋಧವಿದೆ ಎಂದ ಶಾಂತನಗೌಡರ ಮನೆ ಬಾಗಿಲಿಗೆ ನಾನೇನು ಅರ್ಜಿ ಹಾಕಿಕೊಂಡು, ಹೋಗಿದ್ದೀನಾ ಎಂದು ಪ್ರಶ್ನಿಸಿದರು. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್‌ ಸೇರಲು ನಾನು ಅರ್ಜಿ ಹಾಕಿಲ್ಲ. ಯಾರ ಮನೆ ಬಾಗಿಲನ್ನೂ ತುಳಿದಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಎಸ್ಸೆಸ್ ಮಲ್ಲಿಕಾರ್ಜುನ, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಇತರರನ್ನು ಭೇಟಿಯಾಗಿದ್ದು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ಹೇಳಿದರು.

ಶಾಸಕರಿಗೇಕೆ ಕೋಪ ?

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನೆಂದಿಗೂ ರಾಜಕಾರಣ ಮಾಡಿಲ್ಲ. ಹಿಂದೆ ಶಾಂತನಗೌಡರು 2 ಬಾರಿ ಶಾಸಕರಾಗಿದ್ದಾಗಲೂ ಸಂಪೂರ್ಣ ಸಹಕಾರ ನೀಡಿದ್ದೇನೆ. ಕ್ಷೇತ್ರದಲ್ಲಿ ಬರ ಆವರಿಸಿದ್ದರಿಂದ ಅನುದಾನ ಬಿಡುಗಡೆ ಮಾಡಲು ಸಿಎಂ, ಡಿಸಿಎಂ, ಸಚಿವರಿಗೆ ಮನವಿ ಮಾಡಿದರೆ ಶಾಸಕ ಶಾಂತನಗೌಡರಿಗೆ ಏಕೆ ಸಿಟ್ಟು ಎಂದು ಪ್ರಶ್ನಿಸಿದರು.

ಸುಮ್ಮನಿದ್ದೇನೆಂದರೆ ನನ್ನ ದೌರ್ಬಲ್ಯವಲ್ಲ :

ಶಾಸಕ ಶಾಂತನಗೌಡ ಶಾಸಕರಾಗಿ 6 ತಿಂಗಳಾದರೂ ಕ್ಷೇತ್ರದಲ್ಲಿ ಎಷ್ಟು ಸಲ ಬರ ಅಧ್ಯಯನ ಮಾಡಿದ್ದೀರಿ? ಬರ ಅಧ್ಯಯನ ನಡೆಸಿದ್ದರೆ ಅಭಿವೃದ್ಧಿ ಮತ್ತು ಬರಗಾಲದಲ್ಲಿ ರಾಜಕೀಯ ಮಾಡಬಾರದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೇನೆಂದರೆ ಅದು ನನ್ನ ದೌರ್ಬಲ್ಯವಲ್ಲ. ನಿಮಗಿಂತ ಹತ್ತು ಪಟ್ಟು ಹೆಚ್ಚು ಮಾತನಾಡಲು ನನಗೂ ಬರುತ್ತದೆ ಎಂದು ಎಚ್ಚರಿಸಿದರು. ಮೈಮೇಲೆ ಎಚ್ಚರ ಇಟ್ಟು ಮಾತನಾಡಲಿ

ನಾನು ಸದಾ ಜನಪರ ಇರುವವನು. ನನ್ನ ಬಗ್ಗೆ ಹಗುರ ಮಾತನಾಡಿದರೆ, ಸಹಿಸಿಕೊಂಡು ಸುಮ್ಮನಿರುವವನೂ ನಾನಲ್ಲ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಹೋರಾಟ ಮಾಡಿಕೊಂಡೇ ಬಂದವನು. ನನ್ನ ಹೋರಾಟ, ಜನಪರ ಕೆಲಸಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಇನ್ನು ಮುಂದೆ ನನ್ನ ಬಗ್ಗೆ ಮಾತನಾಡುವಾಗ ಶಾಂತನಗೌಡ ಮೈಮೇಲೆ ಎಚ್ಚರ ಇಟ್ಟುಕೊಂಡು ಮಾತನಾಡಲಿ.

ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ
................... 6 ತಿಂಗಳಲ್ಲಿ ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೀರಿ?

* ಶಾಸಕ ಶಾಂತನಗೌಡಗೆ ಮಾಜಿ ಸಚಿವ ರೇಣುಕಾಚಾರ್ಯ ಸವಾಲು

ದಾವಣಗೆರೆ: ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಗೆ ಕಳೆದ 6 ತಿಂಗಳಲ್ಲಿ ಎಷ್ಟು ಅನುದಾನ ತಂದಿದ್ದೀರಿ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಮಾಜಿ ಸಚಿವ ಎಂ.ರೇಣುಕಾಚಾರ್ಯ ಶಾಸಕ ಡಿ.ಜಿ.ಶಾಂತನಗೌಡಗೆ ಸವಾಲು ಹಾಕಿದ್ದಾರೆ.

ನಾನು ಶಾಸಕನಾಗಿದ್ದಾಗ ಅವಳಿ ತಾಲೂಕಿನ ಅಭಿವೃದ್ಧಿಗೆ 4,500 ಕೋಟಿ ರು. ಅನುದಾನ ತಂದಿದ್ದೆ. ಉಳಿದ 1 ಸಾವಿರ ಕೋಟಿ ಅನುದಾನದಲ್ಲಿ ಮುಂದುವರಿದ ಅಭಿವೃದ್ಧಿ ಕಾಮಗಾರಿ ಸಾಗಿವೆ. ಇದನ್ನು ಹೊರತುಪಡಿಸಿ ನೀವೆಷ್ಟು ಅನುದಾನ ತಂದಿದ್ದೀರಿ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ರಾಜ್ಯದ 224 ಕ್ಷೇತ್ರಕ್ಕೂ 50 ಲಕ್ಷದಂತೆ ಅನುದಾನ ಬಿಡುಗಡೆ ಮಾಡಿದ್ದಾರೆ. ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಶಾಂತನಗೌಡರು ಹೊನ್ನಾಳಿ ಕ್ಷೇತ್ರಕ್ಕೆ ತಾವು ತಂದ ಅನುದಾನದ ಬಗ್ಗೆ ದಾಖಲೆಗಳ ಸಹಿತ ಜನರ ಮುಂದೆ ಮಾಹಿತಿ ನೀಡಲಿ. ಈಗ ನೀವು ಶಾಸಕರಾಗಿ ಮಾಡುತ್ತಿರುವ ಕೆಲಸಗಳೆಲ್ಲಾ ಹಿಂದೆ ಇದೇ ರೇಣುಕಾಚಾರ್ಯ ತಂದ ಸಾವಿರಾರು ಕೋಟಿ ರು. ಅನುದಾನದ ಮುಂದುವರಿದ ಕಾಮಗಾರಿ ಅಷ್ಟೇ ಎಂದು ತಿರುಗೇಟು ನೀಡಿದರು.

ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನಮ್ಮ ಕ್ಷೇತ್ರಕ್ಕೆ ಭರಪೂರ ಅನುದಾನ ಬಿಡುಗಡೆ ಮಾಡಿದ್ದರು. ನಬಾರ್ಡ್‌ ನದಿ ಕ್ಷೇತ್ರಗಳಿಗೆ ನೀರು ತುಂಬಿಸಲು 515 ಕೋಟಿ ರು. ಅನುದಾನ ತಂದಿದ್ದು ನಾನು. ಪದವಿ ಪೂರ್ವ ಕಾಲೇಜುಗಳು, ಪ್ರಾಥಮಿಕ ಶಾಲೆಗಳ ಕಟ್ಟಡ, ಸಿಮೆಂಟ್‌ ರಸ್ತೆಗಳು ಹೀಗೆ ಸಾಕಷ್ಟು ಮೂಲ ಸೌಕರ್ಯ, ಅಭಿವೃದ್ಧಿ ಕಾರ್ಯಗಳು ಆಗಿದ್ದು ಬಿಜೆಪಿ ಸರ್ಕಾರದಲ್ಲಿ ಎಂದು ರೇಣುಕಾಚಾರ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಮಂತರು ಗ್ಯಾರಂಟಿಯಿಂದ ದೂರ ಇರಲಿ: ಎಂ.ಬಿ.ಪಾಟೀಲ್‌
ಖಮೇನಿ ಆತ್ಮಕ್ಕೆ ಶಾಂತಿ ದೊರೆಯಲಿ, ಅಮೆರಿಕ ದಾಳಿ ಖಂಡನಾರ್ಹ: ಸಿಎಂ