ಕನ್ನಡಪ್ರಭ ವಾರ್ತೆ, ತುಮಕೂರು
ಎಐಟಿಯುಸಿ ಸಂಘಟನೆಯ 104ನೇ ಸಂಸ್ಥಾಪನಾ ದಿನಾಚರಣೆಯನ್ನು ಅಂತರಸನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಫಿಟ್‌ವೆಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಆಚರಿಸಲಾಯಿತು.ಅಂತರಸನಹಳ್ಳಿ ಬಳಿ ಇರುವ ಫಿಟ್‌ವೇಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಫಿಟ್‌ವೆಲ್ ಎಂಪ್ಲಾಯಿಸ್ ಯೂನಿಯನ್ ಎಐಟಿಯುಸಿ ವತಿಯಿಂದ ತಳಿರು ತೋರಣಗಳನ್ನು ಕಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಎಐಟಿಯುಸಿಯ ಬಾವುಟ ಕಟ್ಟುವ ಮೂಲಕ 104ನೇ ಸಂಸ್ಥಾಪನಾ ದಿನಾಚರಣೆ ಆಚರಿಸಲಾಯಿತು.
ಎಐಟಿಯುಸಿ ಜಿಲ್ಲಾ ಕಾರ್ಯಾಧ್ಯಕ್ಷ ಗಿರೀಶ್ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಎಐಟಿಯುಸಿ ಸಂಘಟನೆಯು ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಲಜಪತ್‌ರಾಯ್ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಗಿತ್ತು ಅಂದು ಭಾರತ ದೇಶವನ್ನು ಬ್ರಿಟೀಷರು ಆಡಳಿತ ನಡೆಸುತ್ತಿದ್ದರು. ಕಾರ್ಮಿಕರ ಶೋಷಣೆಯನ್ನು ಮುಕ್ತಿಗೊಳಿಸಿ ಸಮತ ಸಮಾಜ ನಿರ್ಮಿಸಲು ಹಾಗೂ ಕಾರ್ಮಿಕ ವರ್ಗವನ್ನು ಸ್ವಾತಂತ್ರ್ಯಹೋರಾಟದಲ್ಲಿ ಧುಮುಕುವಂತೆ ಮಾಡಲು ಎಐಟಿಯುಸಿ ಸಂಘಟನೆ ಸ್ಥಾಪನೆಯಾಯಿತು ಎಂದರು.ದೇಶದ ಏಕೈಕ ಪ್ರಥಮ ಕಾರ್ಮಿಕ ಸಂಘಟನೆ ಎಐಟಿಯುಸಿ ಇದು ಸ್ಥಾಪನೆಯಾದ ನಂತರ 1926 ರಲ್ಲಿ ಟ್ರೇಡ್ ಯೂನಿಯನ್ ಕಾಯ್ದೆ ಜಾರಿಗೆ ಬಂತು ಇದು ಎಐಟಿಯುಸಿ ಸಂಘಟನೆಯ ಹೋರಾಟಕ್ಕೆ ಸಂದ ಜಯ ನಂತರ 1947-48 ಕಾರ್ಮಿಕ ಕಾಯ್ದೆ, ಬೋನಸ್ ಕಾಯ್ದೆ, 1970ರ ಉಪಧನ ಕಾಯ್ದೆ 1996 ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2004ರ ರಾಷ್ಟ್ರೀಯ ಉದ್ಯೋಗ ಕಾಯ್ದೆ ಸೇರಿದಂತೆ ಇನ್ನು ಹಲವಾರು ಕಾಯ್ದೆಗಳು ಎಐಟಿಯುಸಿಯ ಹೋರಾಟದ ಭಾಗವಾಗಿ ಬಂದ ಕಾಯ್ದೆಗಳು ಜಾರಿಗೆ ಬಂದವು. ದೇಶದ 60 ಕೋಟಿ ಕಾರ್ಮಿಕರ ಪರವಾಗಿ ಹೋರಾಟ ನಡೆಸುವ ಕ್ರಾಂತಿಕಾರಿ ಸಂಘಟನೆಯಾಗಿದೆ ಇದನ್ನು ಬೆಳೆಸುವ ಜವಾಬ್ದಾರಿ ಕಾರ್ಮಿಕರದ್ದಾಗಿದೆ ಎಂದರು.
ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, ಎಐಟಿಯುಸಿ ಸಂಘಟನೆಯಿಂದ ಹಲವಾರು ಸವಲತ್ತುಗಳನ್ನು ಹೋರಾಟದಿಂದ ಪಡೆಯಲಾಗಿದೆ ಕಾರ್ಮಿಕರು ಐಕ್ಯತೆಯಿಂದ ಇದ್ದರೆ ಮತ್ತಷ್ಟು ಸವಲತ್ತು ಪಡೆಯಬಹುದು ಎಂದರು.ಸಂಘದ ಪದಾಧಿಕಾರಿಗಳಾದ ರಘುನಾಥ್‌ಸ್ವಾಮಿ, ಕಾಂತರಾಜು, ರಂಗನಾಥ್, ವಿಜಿಕುಮಾರ್ ಮಲ್ಲೇಶ್, ಉಮೇಶ್, ಮಲ್ಲಿಕಾರ್ಜುನ್, ಪ್ರಕಾಶ್ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.
.