ಎಲ್ಲೆಂದರಲ್ಲಿ ಕಸ ಎಸೆದರೆ ಅದು ಮರಳಿ ನಿಮ್ಮ ಮನೆಯಂಗಳಕ್ಕೆ ಬರಲಿದೆ ಜೋಕೆ! .ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಈ ರೀತಿ ವಿನೂತನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಎಲ್ಲೆಂದರಲ್ಲಿ ಕಸ ಎಸೆದರೆ ಅದು ಮರಳಿ ನಿಮ್ಮ ಮನೆಯಂಗಳಕ್ಕೆ ಬರಲಿದೆ ಜೋಕೆ!
ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಹು-ಧಾ ಮಹಾನಗರ ಪಾಲಿಕೆ ಈ ರೀತಿ ವಿನೂತನ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಮೂಲಕ ಜಾಗೃತಿ ಮೂಡಿಸುವ ಜತೆ ಜತೆಗೆ ಕಸ ಎಸೆಯುವವರಿಗೆ ಪಾಠ ಕಲಿಸಲು ಮುಂದಾಗಿದೆ. ಶೀಘ್ರದಲ್ಲೇ ಇದು ಕಾರ್ಯರೂಪಕ್ಕೆ ಬರಲಿದೆ.
ನಗರದ ವಿವಿಧ ಪ್ರದೇಶಗಳಲ್ಲಿ ಕೆಲವರು ಕಸ, ಕಟ್ಟಡ ನಿರ್ಮಾಣದ ತ್ಯಾಜ್ಯ ಬದಿ, ಖಾಲಿ ಜಾಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯುತ್ತಿರುವುದು ಕಂಡು ಬಂದಿದೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುವುದಲ್ಲದೆ, ಸಾರ್ವಜನಿಕ ಆರೋಗ್ಯಕ್ಕೂ ಸಮಸ್ಯೆಯಾಗುತ್ತಿದೆ. ನಗರದ ಸೌಂದರ್ಯಕ್ಕೂ ಧಕ್ಕೆ ಉಂಟಾಗುತ್ತಿದೆ. ಈ ಕುರಿತು ಹಲವು ಬಾರಿ ಎಚ್ಚರಿಕೆ ನೀಡಿದರೂ ನಿಯಮ ಉಲ್ಲಂಘನೆ ಮುಂದುವರಿದ ಹಿನ್ನೆಲೆಯಲ್ಲಿ ಪಾಲಿಕೆ ಈ ಕ್ರಮ ಕೈಗೊಳ್ಳಲು ಮುಂದಾಗಿದೆ.
ಹೇಗೆಲ್ಲ ದಂಡ ವಿಧಿಸುತ್ತಾರೆ?
ಪಾಲಿಕೆ ಸಿಬ್ಬಂದಿ ಹಾಗೂ ಆರೋಗ್ಯ ನಿರೀಕ್ಷಕರು, ಪೌರಕಾರ್ಮಿಕರು ನಗರದಲ್ಲಿನ ಪ್ರಮುಖ ಪ್ರದೇಶಗಳಲ್ಲಿ ನಿಗಾ ವಹಿಸಿ, ಕಸ ಎಸೆಯುವವರನ್ನು ಗುರುತಿಸುತ್ತಿದ್ದಾರೆ. ಸಿಸಿ ಟಿವಿ ಕ್ಯಾಮೆರಾ ಹಾಗೂ ಸ್ಥಳೀಯರ ಮಾಹಿತಿಯ ಆಧಾರದ ಮೇಲೆ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಎಸೆದ ಕಸದಲ್ಲಿ ನಿವಾಸಿಗಳ ಹೆಸರಿನ ಕಾಗದ, ಬಿಲ್‌ಗಳನ್ನು ಪತ್ತೆ ಹಚ್ಚಲಾಗುತ್ತಿದೆ. ಇನ್ನು ಕೆಲವೆಡೆಗಳಲ್ಲಿ ತ್ಯಾಜ್ಯ ಎಸೆಯುವ ವೇಳೆ ಪಾಲಿಕೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದವರಿಗೆ ಸಾವಿರಾರು ರುಪಾಯಿ ದಂಡ ವಿಧಿಸಿ ಮತ್ತೊಮ್ಮೆ ಕಸ ಎಸೆಯದಂತೆ ಸೂಚನೆ ನೀಡಲಾಗಿದೆ.
ಎಲ್ಲೆಲ್ಲಿ ದಂಡ ವಿಧಿಸಿದ್ದಾರೆ
ನಗರದ ವಿವಿಧೆಡೆ ಕಸ ಎಸೆದವರಿಗೆ ಈಗಾಗಲೇ 13 ಸಾವಿರಕ್ಕೂ ಅಧಿಕ ದಂಡ ವಿಧಿಸಲಾಗಿದೆ. ಕೆಲವೆಡೆ ಟ್ರ್ಯಾಕ್ಟರ್ ಮೂಲಕ ಕಸ ಎಸೆದು ಹೋಗುತ್ತಿದ್ದವರನ್ನು ತಡೆದು ದಂಡ ವಿಧಿಸಿದ್ದಲ್ಲದೇ, ಅವರಿಂದಲೇ ಕಸ ತೆಗೆಸಿದ್ದುಂಟು. ಹೀಗೆ 10ಕ್ಕೂ ಅಧಿಕ ಕಡೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಿದ್ದವರನ್ನು ಪತ್ತೆ ಹಚ್ಚಿ ಕನಿಷ್ಠ ₹1 ಸಾವಿರದಿಂದ ₹6 ಸಾವಿರದ ವರೆಗೂ ದಂಡ ವಿಧಿಸಿದ್ದಾರೆ.
ಜನರ ಸ್ವಾಗತ
ಪಾಲಿಕೆಯ ಈ ವಿಶಿಷ್ಟ ಕಾರ್ಯವನ್ನು ನಗರದ ಹಲವು ನಾಗರಿಕರು ಸ್ವಾಗತಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ಕಠಿಣ ಕ್ರಮ ಅಗತ್ಯವಾಗಿದ್ದು, ಇಂತಹ ಕ್ರಮಗಳಿಂದ ಇತರರಿಗೂ ಎಚ್ಚರಿಕೆ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದಂಡ ಹಾಗೂ ಕಾನೂನು ಕ್ರಮಗಳ ಜತೆಗೆ ಪಾಲಿಕೆಯು ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಈ ಕ್ರಮದ ಉದ್ದೇಶ ಯಾರನ್ನೂ ಅವಮಾನಿಸುವುದಲ್ಲ. ಬದಲಾಗಿ ಸಾರ್ವಜನಿಕ ಜವಾಬ್ದಾರಿಯ ಅರಿವು ಮೂಡಿಸುವುದಾಗಿದೆ. ಈಗಾಗಲೇ ಕಸ ಚೆಲ್ಲುವವರನ್ನು ಗುರುತಿಸಿ ದಂಡ ಹಾಕಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕಸ ಎಸೆಯುವವರ ಮನೆ ಬಾಗಿಲಿಗೆ ಕಸ ಸುರಿದು ದಂಡ ವಿಧಿಸುವ ಕಾರ್ಯ ನಡೆಯಲಿದೆ ಎಂದು ಪಾಲಿಕೆ ಘನತ್ಯಾಜ್ಯ ವಸ್ತು ನಿರ್ವಹಣೆಯ ಕಾರ್ಯನಿರ್ವಾಹಕ ಅಭಿಯಂತರ ಸಂತೋಷ ಯರಂಗಳ್ಳಿ ತಿಳಿಸಿದ್ದಾರೆ.
ಎಸೆದ ಕಸ ಮರಳಿ ಮನೆ ಬಾಗಿಲಿಗೆ ಹಾಕಲು ಮುಂದಾಗಿರುವ ಪಾಲಿಕೆ ನಿರ್ಧಾರ ಶ್ಲಾಘನೀಯ. ಇದರೊಂದಿಗೆ ಎಲ್ಲೆಡೆಯೂ ಮನೆ ಮನೆ ಕಸ ತುಂಬುವ ವಾಹನಗಳು ನಿತ್ಯವೂ ಬರುವಂತಾಗಬೇಕು. ಇದರಿಂದಾಗಿ ಸಾರ್ವಜನಿಕರು ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ನಗರ ನಿವಾಸಿ ಬಸವರಾಜ ಧಾರವಾಡಶೆಟ್ಟರ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.