ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆದ ಆಲಮಟ್ಟಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಕುರಿತು ಸಾಮಾಜಿಕ ಹೋರಾಟಗಾರ ಉದಯಸಿಂಗ್ ರಾಯಚೂರ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಯೋಜನೆಯನ್ನು ಬ್ರಿಟಿಷರ ಆಡಳಿತಾವಧಿಯಲ್ಲಿಯೇ ರೂಪಿಸಲಾಗಿತ್ತು. ಈ ಮಾರ್ಗದಿಂದಾಗುವ ಪ್ರಯೋಜನಗಳ ಬಗ್ಗೆ ಅಂದಿನ ಆಡಳಿತಗಾರರಿಗೆ ಅರಿವಿದ್ದರೂ, ಇಂದಿನ ಸರ್ಕಾರಕ್ಕೆ ಮಾತ್ರ ಇದರ ಮಹತ್ವದ ಅರಿವು ಮೂಡದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಉದಯಸಿಂಗ್ ರಾಯಚೂರ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ನಡೆದ ಆಲಮಟ್ಟಿ-ಯಾದಗಿರಿ ರೈಲ್ವೆ ಹೋರಾಟ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಈ ರೈಲ್ವೆಯೋಜನೆಯನ್ನು ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಹಳೆಯ ಯೋಜನೆಯಾಗಿದ್ದರೂ ಇದುವರೆಗೆ ಅನುಷ್ಠಾನಗೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.
ಸರ್ಕಾರ, ಜನರು, ಉದ್ಯಮಿಗಳಿಗೆ ಲಾಭ:ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ ಕಾರ್ಯರೂಪಕ್ಕೆ ಬಂದರೆ ಈ ಭಾಗದ ಜನರು, ಉದ್ಯಮಿಗಳು ಹಾಗೂ ಸರ್ಕಾರಕ್ಕೂ ಹಲವು ರೀತಿಯಲ್ಲಿ ಅನುಕೂಲವಾಗಲಿದೆ. ಸ್ಥಳೀಯವಾಗಿ ಉತ್ಪಾದನೆಯಾಗುವ ಕೃಷಿ ಉತ್ಪನ್ನಗಳು ಹಾಗೂ ಇತರೆ ಸರಕುಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸಲು ಗೂಡ್ಸ್ ರೈಲು ವ್ಯವಸ್ಥೆ ಸಹಕಾರಿಯಾಗಲಿದೆ. ಜೊತೆಗೆ ಸಾರ್ವಜನಿಕರ ಪ್ರಯಾಣಕ್ಕೂ ಅನುಕೂಲವಾಗಲಿದ್ದು, ವ್ಯಾಪಾರ ವಹಿವಾಟು ಹೆಚ್ಚುವುದರಿಂದ ಸರ್ಕಾರದ ಆದಾಯಕ್ಕೂ ಲಾಭವಾಗಲಿದೆ ಎಂದವರು ಹೇಳಿದರು.
ಸಹಿ ಸಂಗ್ರಹ, ಜನಜಾಗೃತಿ ಅಭಿಯಾನಕ್ಕೆ ಚಾಲನೆ:ರೈಲ್ವೆ ಮಾರ್ಗವನ್ನು ಕಾರ್ಯರೂಪಕ್ಕೆ ತರಲು ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಹೋರಾಟ ಸಮಿತಿ ವತಿಯಿಂದ ಸಹಿ ಸಂಗ್ರಹ ಹಾಗೂ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ರೈಲ್ವೆ ಮಾರ್ಗದ ವ್ಯಾಪ್ತಿಗೆ ಬರುವ ಪ್ರತಿಯೊಂದು ಗ್ರಾಮದ ಮನೆ-ಮನೆಗೆ ತೆರಳಿ ಯೋಜನೆಯ ಮಹತ್ವದ ಕುರಿತು ಜಾಗೃತಿ ಮೂಡಿಸುವುದು, ಸಾರ್ವಜನಿಕರಿಂದ ಸಹಿ ಸಂಗ್ರಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕವೂ ವ್ಯಾಪಕ ಪ್ರಚಾರ ನಡೆಸುವ ಮೂಲಕ ಹೋರಾಟ ಮತ್ತಷ್ಟು ಬಲಪಡಿಸುವುದಾಗಿ ಸಮಿತಿ ಸದಸ್ಯರು ತಿಳಿಸಿದರು.
ಸಭೆಯಲ್ಲಿ ಪಟ್ಟಣದ ಉದ್ಯಮಿ ಸತೀಶ ಓಸ್ವಾಲ್, ಬಸಯ್ಯ ನಂದಿಕೇಶ್ವರಮಠ, ಭೀಮಾಶಂಕರ ಪತ್ತಾರ, ಕಿರಣ ಪಾಟೀಲ ಮಾತನಾಡಿದರು.ಸಂಗಮೇಶ ಬಿರಾದಾರ, ಬಿ.ಎಸ್. ಮೇಟಿ, ನಾಗಪ್ಪ ವಡ್ಡರ, ಅರವಿಂದ ಲದ್ದಿಮಠ, ವಿಜಯ ಬೆಲ್ಲದ, ರಾಜು ಬಾಗೇವಾಡಿ, ರಾಜು ಬೊಳ್ಳೊಳ್ಳಿ, ಎಂ.ಕೆ. ಒಣರೊಟ್ಟಿ, ಮುತ್ತುಕಡಿ, ಸುನೀಲ ಇಲ್ಲೂರ, ರಾಜುದೇಶ ಪಾಂಡೆ, ಪುನೀತ ಹಿಪ್ಪರಗಿ, ಸಂಗಣ್ಣಕಂಚಾಣಿ, ಎಚ್.ಬಿ. ಕೊಂಗನೂರ, ಬಿ.ಎಸ್. ಅಂಗಡಿ, ಸಿ.ವಿ. ಮುರಾಳ, ಮಂಜು ಸಜ್ಜನ, ಗೋವಿಂದ ಪಾಟೀಲ, ಗುಲಾಬಚಂದ್ ಓಸ್ವಾಲ್, ಆರ್.ಎನ್. ಕುಂಟೋಜಿ, ಪರಶುರಾಮ ಹಳ್ಳೂರ, ಚನ್ನಪ್ಪ ಮಂಗ್ಯಾಳ, ಬಿ.ಪಿ. ಮುರಾಳ, ಶಿವಪ್ಪ ಮೇಟಿ, ಅಶೋಕ ರೇವಡಿ ಸೇರಿದಂತೆ ಹೋರಾಟ ಸಮಿತಿ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.