ಶಿರಸಿ: ಶಾಸ್ತ್ರಗಳಲ್ಲಿ ಹೇಳಿದ ಸೂಕ್ಷ್ಮಗಳನ್ನು ಅರಿತು ಕರ್ಮಗಳನ್ನು ಮಾಡಿದರೆ ಕರ್ಮಗಳು ಹೆಚ್ಚು ಬಲಿಷ್ಠವಾಗುತ್ತವೆ ಎಂದು ಸೋಂದಾ ಸ್ವರ್ಣವಲ್ಲೀಯ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಸಲಾಗುತ್ತಿರುವ ಚಾತುರ್ಮಾಸ ವ್ರತಾಚರಣೆಯ ಹಿನ್ನೆಲೆಯಲ್ಲಿ ಹಮ್ಮಿಕೊಂಡ ವೈದಿಕ ಚಿಂತನಾ ಗೋಷ್ಠಿಯಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.ಇಂದಿನ ದಿನಗಳಲ್ಲಿ ಚಿಂತನಾ ಗೋಷ್ಠಿಗಳು ಆಗಾಗ ನಡೆಯಬೇಕು. ಇದು ಅತೀ ಅವಶ್ಯವಾಗಿದೆ. ಇವತ್ತಿನ ಸಂದರ್ಭದಲ್ಲಿ ಅನೇಕ ಯುವ ವೈದಿಕರು ಬಂದು ಸೇರಿರುವುದು ಸಂತೋಷವಾಗಿದೆ ಎಂದರು.
ಯಜಮಾನರಿಗೆ ಸರಿಯಾದ ತಿಳಿವಳಿಕೆ ಕೊಡುವ, ಅವನನ್ನು ಸರಿಯಾಗಿ ಕರ್ಮಗಳಲ್ಲಿ ತೊಡಗಿಸುವ, ಅವನು ಮಾಡುವ ಕರ್ಮಗಳಲ್ಲಿ ಶ್ರದ್ಧೆಯನ್ನು ಮೂಡಿಸುವ ಹೊಣೆಗಾರಿಕೆ ವೈದಿಕರ ಮೇಲೆ ಇದೆ. ಶಾಸ್ತ್ರ ಸಮ್ಮತವಾದ ರೀತಿಯಲ್ಲಿ ಕರ್ಮಗಳನ್ನು ಮಾಡಿಸಬೇಕಾದ ಕರ್ತವ್ಯ. ಎಲ್ಲ ವೈದಿಕರ ಮೇಲೆ ಇದೆ. ಶಾಸ್ತ್ರ ಸಮ್ಮತ ಅಲ್ಲದ ಕರ್ಮಗಳನ್ನು ಯಾವ ವೈದಿಕರು ಮಾಡಬಾರದು. ಗುರು ಸ್ಥಾನದಲ್ಲಿ ನಿಂತು ಯಜಮಾನನ್ನು ಸರಿಯಾದ ಮಾರ್ಗದಲ್ಲಿ ನಡೆಸುವ ಜವಾಬ್ದಾರಿ ವೈದಿಕರದ್ದು. ಅದನ್ನು ಅರಿತು ಕರ್ತವ್ಯದಲ್ಲಿ ತೊಡಗಬೇಕು ಎಂದರು.ವೈದಿಕರ ಹೊಣೆಗಾರಿಕೆ ಬಹಳ ಗುರುತರವಾದದ್ದು. ಕರ್ಮಗಳನ್ನು ಮಾಡಿಸಿ ಅದು ಮುಗಿದ ನಂತರ ಮನಸ್ಸಿಗೆ ಸಂತೋಷ ಉಂಟಾಗುವ ರೀತಿಯಲ್ಲಿ, ಅತ್ಯಂತ ಶ್ರದ್ಧೆಯಿಂದ ಮಾಡಿಸಬೇಕು. ಇದರಿಂದ ಅನೇಕ ಪ್ರಯೋಜನಗಳು ಇವೆ. ನಾವು ಮಾಡುವ ಕರ್ಮಗಳಲ್ಲಿ ಪ್ರತಿಯೊಂದು ಹಂತವನ್ನು ಗಮನಿಸಿ, ಅದರಲ್ಲೇ ನಮ್ಮ ಮನಸ್ಸನ್ನು ಕೇಂದ್ರೀಕರಿಸಿ ಕರ್ಮಗಳನ್ನು ಮಾಡಿಸಿದರೆ ಇದು ಸಾಧ್ಯ. ಹೀಗೆ ಮಾಡಿಸಿದ ವೈದಿಕರು ಅತ್ಯಂತ ಶ್ರೇಷ್ಠ ವೈದಿಕರು ಎಂದು ಕರೆಸಿಕೊಳ್ಳುತ್ತಾರೆ. ಹಾಗೆ ಎಲ್ಲರೂ ಆಗುವ ಪ್ರಯತ್ನ ಮಾಡಬೇಕು. ಪ್ರತಿಯೊಂದು ಸೀಮೆಯಲ್ಲಿ ವರ್ಷಕ್ಕೆ ಒಂದಾದರೂ ವೈದಿಕ ಪರಿಷತ್ತಿನಿಂದ ಕಾರ್ಯಕ್ರಮಗಳು ಆಗಬೇಕು ಎಂದರು.
ಶಾಸ್ತ್ರೀಯವಾದ ಕರ್ಮಗಳನ್ನು ಮಾಡಲು ಹತ್ತಿರ ಬರುತ್ತಾರೆ. ಹೆಜ್ಜೆ ಹೆಜ್ಜೆಗೆ ಇರುವ ಸಂಶಯವನ್ನು ಇಂತಹ ಚಿಂತನಾ ಗೋಷ್ಠಿಯಿಂದ ಪರಿಹರಿಸಿ ಕೊಳ್ಳಲು ಸಾಧ್ಯ. ಆಗಾಗ ಎಲ್ಲ ವೈದಿಕರು ಒಂದೆಡೆ ಸೇರುವುದರಿಂದ ತಪ್ಪುಗಳು ಅರಿವಿಗೆ ಬಂದು ಕರ್ಮಗಳಲ್ಲಿ ಸರಿಯಾದ ನಿಲುವು ಅರಿವಿಗೆ ಬರುತ್ತದೆ ಎಂದರು.ಬೆಳಗಿನ ಗೋಷ್ಠಿಯಲ್ಲಿ ವಿದ್ವಾನ್ ಚಿನ್ಮಯ ಹೆಗಡೆ, ವಾಟಗಾರ ಆಚಮನ ಮತ್ತು ಪ್ರಾಣಾಯಾಮ ಹಾಗೂ ಮಧ್ಯಾಹ್ನ ವಿದ್ವಾನ್ ಗೋಪಾಲಕೃಷ್ಣ ಭಟ್ಟ ಕವಡಿಕೆರೆ ಸಂಕಲ್ಪ ಎಂಬ ವಿಷಯಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ವೈದಿಕ ಪರಿಷತ್ತಿನ ಸಂಚಾಲಕ ಡಾ.ಕೃಷ್ಣ ಜೋಶಿ ಮೂಲೆಮನೆ, ಡಾ.ಮಹಾಬಲೇಶ್ವರ ಭಟ್ಟ ಕಿಚ್ಚಿಕೇರಿ ಹಾಗೂ ಇತರ ಹಿರಿಯ ವೈದಿಕ ವಿದ್ವಾಂಸರು ಇದ್ದರು.
ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ದೀಪ ಬೆಳಗುವುದರ ಮೂಲಕ ಗೋಷ್ಠಿಗೆ ಚಾಲನೆ ನೀಡಿದರು.