ಹಣವಿಲ್ಲದೆ ಗೆಲ್ಲಬೇಕೆಂದರೆ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿ: ಕೆ.ಎನ್.ರಾಜಣ್ಣ

KannadaprabhaNewsNetwork | Published : Dec 9, 2024 12:45 AM

ಸಾರಾಂಶ

ಸಹಕಾರಿ ಕ್ಷೇತ್ರದಲ್ಲಿ ಜಾತಿ ಹಾಗೂ ಪಕ್ಷ ಪ್ರವೇಶವಾದರೆ ಅಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಹಕಾರಿ ಕ್ಷೇತ್ರದಲ್ಲಿ ಜಾತಿ ಹಾಗೂ ಪಕ್ಷ ಪ್ರವೇಶವಾದರೆ ಅಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗುವುದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ನಗರದ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಹಣ, ಜಾತಿ ಇಲ್ಲದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೆಂದರೆ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿ ಗುರುತಿಸಿಕೊಳ್ಳಬೇಕು. ಇದಕ್ಕೆ ನಾನೇ ಉದಾಹರಣೆ. ಅಗೋಚರ ಮತದಾರರೂ ನಮಗೆ ಮತ ನೀಡಿ ಗೆಲ್ಲಿಸಿದ್ದಾರೆ. ಸಹಕಾರಿ ಕ್ಷೇತ್ರ ಅಂತಹ ಪ್ರಭಾವಶಾಲಿ ಎಂದು ಹೇಳಿದರು.

ಕಠಿಣವಾಗಿದ್ದ ಸಹಕಾರಿ ಕಾಯ್ದೆಗೆ ಬಹಳಷ್ಟು ತಿದ್ದುಪಡಿ ಮಾಡಿ ಸರಳೀಕರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಜನಸಾಮಾನ್ಯರೂ ಸಹಕಾರಿ ಕ್ಷೇತ್ರಗಳಲ್ಲಿ ಸರಳವಾಗಿ ಸಾಲ ಪಡೆದು ತಮ್ಮ ವ್ಯವಹಾರಗಳಿಗೆ ಬಳಸಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಸಹಕಾರ ಸಂಘಗಳೇ ಹೆಚ್ಚು ಸಹಕಾರಿ ಎಂದರು.ಈ ಬಾರಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಲ್ಲರೂ ಅವರ ಸಂಘಗಳ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ. ಸಮಾಜಪರ ಕೆಲಸ ಮಾಡಿದವರನ್ನು ಗುರುತಿಸಿ ಗೌರವಿಸುವುದು ಉತ್ತಮ ಕೆಲಸ, ಇದರಿಂದ ಅವರು ಮತ್ತಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತಾಗುತ್ತದೆ. ಜೊತೆಗೆ ಇತರರಿಗೂ ಪ್ರೇರಣೆಯಾಗುತ್ತದೆ ಎಂದು ಹೇಳಿದರು.

ಆರ್ಥಿಕ ಬದಲಾವಣೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಮೊದಲು ಸಹಕಾರಿ ಆಂದೋಲನದ ಇತಿಹಾಸ ತಿಳಿಯಬೇಕು, ಇತಿಹಾಸ ತಿಳಿದರಷ್ಟೇ ನಾವೂ ಕೆಲಸ ಮಾಡಿ ಇತಿಹಾಸ ಸೃಷ್ಟಿಸಿಲು ಸಾಧ್ಯ. ಯುವಕರು, ಯುವತಿಯರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಚಳವಳಿ ನಂತರ ಹೆಚ್ಚು ಕ್ರಾಂತಿ ರೂಪ ಪಡೆದು ಪ್ರವರ್ಧಮಾನಕ್ಕೆ ಬಂದದ್ದು ಸಹಕಾರಿ ಆಂದೋಲನ. 1905ರಲ್ಲಿ ಗದಗ ಜಿಲ್ಲೆಯಲ್ಲಿ ಎಸ್.ಎಸ್.ಪಾಟೀಲ್ ಮೊಟ್ಟ ಮೊದಲ ಸಹಕಾರ ಸಂಘ ಸ್ಥಾಪನೆ ಮಾಡಿದರು. ಅಂದಿನಿಂದ ಇಂದಿನವರೆಗೆ ಸಹಕಾರ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ.

ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು ಗ್ರಾಮ ಪಂಚಾಯ್ತಿ, ತಾಲ್ಲೂಕು, ಜಿಲ್ಲಾ ಪಂಚಾಯ್ತಿಯಂತಹ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ರೀತಿಯಲ್ಲಿ ನಾಯಕತ್ವ ರೂಪಿಸಿಕೊಳ್ಳಲು ಸಾಧ್ಯವಾಯಿತು. ಸಹಕಾರಿ ಆಂದೋಲನ ರಾಜಕೀಯ ಕ್ಷೇತ್ರಕ್ಕೂ ಶಕ್ತಿ ತುಂಬಿದೆ ಎಂದು ಹೇಳಿದರು.

ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ಸಹಕಾರ ಕ್ಷೇತ್ರದಿಂದ ಎಲ್ಲ ವರ್ಗದವರೂ ಸಾಲ ಪಡೆದು ಆರ್ಥಿಕ ಸದೃಢರಾಗಲು ಅವಕಾಶವಿದೆ. ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಸಹಕಾರ ಸಂಘಗಳಿಂದ ಸಾಲ ಪಡೆದು ವ್ಯವಹಾರ ವೃದ್ಧಿಸಿಕೊಳ್ಳುತ್ತಿದ್ದಾರೆ. ಇದು ಸಹಕಾರಿ ಸಂಘಗಳಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಈ ಬಾರಿ ಸಹಕಾರ ರತ್ನ ಪ್ರಶಸ್ತಿ ಪಡೆದ ಮಾಜಿ ಶಾಸಕ ಗಂಗಹನುಮಯ್ಯ, ಹನುಮಂತಯ್ಯ, ಪಿ.ಮೂರ್ತಿ, ಟಿ.ಆರ್.ಆಂಜನಪ್ಪ, ಹೆಬ್ಬಾಕ ಮಲ್ಲಿಕಾರ್ಜುನ್, ಜಿ.ಜೆ.ರಾಜಣ್ಣ, ಬಿ.ಸಿ.ಉಮೇಶ್, ಜಿ.ಎಸ್.ರವಿ, ಪಿ.ಎಸ್.ಗುರುಪ್ರಸಾದ್ ಪಿಸ್ಸೆ, ಎಸ್.ರಾಮಚಂದ್ರಯ್ಯ, ಎಲ್.ರಾಮಣ್ಣ, ಚಂದ್ರಶೇಖರಾರಾಧ್ಯ, ಎಸ್.ಎಲ್.ರಂಗನಾಥ್, ಟಿ.ಹೆಚ್.ಶಿವಾನಂದ್, ಸೈಯದ್ ಮೆಹಬೂಬ್ ಪಾಷಾ, ಡಿ.ಟಿ.ರಂಗಸ್ವಾಮಿ ಅವರನ್ನು ಸಚಿವ ಕೆ.ಎನ್.ರಾಜಣ್ಣ ಸನ್ಮಾನಿಸಿ ಗೌರವಿಸಿದರು.ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್, ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ, ಒಕ್ಕೂಟದ ಉಪಾಧ್ಯಕ್ಷ ಡಿ.ಎಂ.ಸತೀಶ್, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಉದ್ಯಮಿ ದೇವೇಂದ್ರಪ್ಪ, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಲಕ್ಷಣ್, ಒಕ್ಕೂಟದ ಖಜಾಂಚಿ ಎಸ್.ಹರೀಶ್ ಆಚಾರ್ಯ, ಶಾಂತಕುಮಾರ್, ಮಂಜೇಶ್ ಒಲಂಪಿಕ್, ಗುರುರಾಘವೇಂದ್ರ, ಎಂ.ವಿ.ತೇಜೇಶ್, ಡಮರುಗೇಶ್ ಮೊದಲಾದವರು ಭಾಗವಹಿಸಿದ್ದರು.

Share this article