ರಾಣಿಬೆನ್ನೂರು:ಗ್ರಾಮೀಣ ಭಾಗದ ನರೇಗಾ ಕೂಲಿ ಕಾರ್ಮಿಕರ ಕುಟುಂಬದ ಆರ್ಥಿಕ ಭದ್ರತೆಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ವರದಾನವಾಗಿವೆ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿ ಎಮ್.ಎಚ್. ಮಡಿವಾಳರ ಹೇಳಿದರು. ತಾಲೂಕಿನ ಹನುಮಾಪುರ ಗ್ರಾಮದ ಸಮುದಾಯ ಭವನದಲ್ಲಿ ಹೊನ್ನತ್ತಿ ಗ್ರಾಮ ಪಂಚಾಯತಿ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ ವರ್ಷ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಗೆ 436ರು. ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ-20ರು.ಗಳಂತೆ ತಮ್ಮ ಖಾತೆಯಲ್ಲಿ ಕಡಿತವಾಗಲಿದ್ದು ತಮಗೆ ಏನಾದರೂ ಅಪಘಾತವಾಗಿ ಅಂಗವಿಕಲರಾದರೆ ಒಂದು ಲಕ್ಷ ಹಾಗೂ ಮೃತ ಪಟ್ಟಲ್ಲಿ ಅವಲಂಬಿತರಿಗೆ ಎರಡು ಲಕ್ಷ ಪರಿಹಾರ ಸಿಗಲಿದೆ. ನರೇಗಾ ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ನರೇಗಾ ತಾಲೂಕು ಐಇಸಿ ಸಂಯೋಜಕ ದಿಂಗಾಲೇಶ ಅಂಗೂರ ಮಾತನಾಡಿ, 2025-26ನೇ ಸಾಲಿನ ನರೇಗಾ ಕ್ರಿಯಾ ಯೋಜನೆಯಲ್ಲಿ ರೈತರು ದನದ ಕೊಟ್ಟಿಗೆ, ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ ಕಾಮಗಾರಿಗಳು, ರೇಷ್ಮೆ ಹಾಗೂ ಅರಣ್ಯ ಇತ್ಯಾದಿ ವೈಯಕ್ತಿಕ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸುವಂತೆ ತಿಳಿಸಿದರು. ಇದಲ್ಲದೆ ಕೂಲಿ ಕಾರ್ಮಿಕರು ಕೂಲಿ ಕೆಲಸ ಮಾಡುವ ಕೆರೆ ಹೂಳೆತ್ತುವ, ನೀರು ಗಾಲುವೆ ಅಭಿವೃದ್ಧಿ, ಕಾಲುವೆಗಳ ಹೂಳೆತ್ತುವುದು, ರೈತ ಸಂಪರ್ಕ ರಸ್ತೆ, ಅರಣ್ಯ ಪ್ರದೇಶದಲ್ಲಿ ಕಂದಕ ನಿರ್ಮಾಣ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಲು ಕರೆ ನೀಡಿದರು.ಗ್ರಾಪಂ ಅಧ್ಯಕ್ಷ ಮಹೇಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಫಕ್ಕೀರವ್ವ ಡೊಳ್ಳಿನ, ರಾಣಿಬೆನ್ನೂರು ಲೀಡ್ ಬ್ಯಾಂಕ್ ಸಂಚಾಲಕ ಮಾಂತೇಶ ಮ್ಯಾಗೇರಿ, ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ದೇವರಾಜ ತಳವಾರ, ಕಾರ್ಯದರ್ಶಿ ಮೋಹನ್ ಜಾಡರ, ಗ್ರಾಪಂ ಸಿಬ್ಬಂದಿ ವರ್ಗ, ಅಂಗವನಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘದ ಪ್ರತಿನಿಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.