ಕೆಲಸ ಮಾಡಲು ಮನಸ್ಸಿದ್ದರೆ ಇರಿ, ಇಲ್ಲದಿದ್ದರೆ ಹೋಗಿ: ಮಂಕಾಳು ಎಸ್. ವೈದ್ಯ

KannadaprabhaNewsNetwork | Published : Jun 13, 2024 12:53 AM

ಸಾರಾಂಶ

ಹೊನ್ನಾವರ, ಭಟ್ಕಳದಲ್ಲಿ ಡೆಂಘೀ ಜ್ವರವನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಭಟ್ಕಳ: ಯಾರಿಗೆ ಕೆಲಸ ಮಾಡಲು ಮನಸ್ಸು ಇದೆಯೋ ಅವರು ಇರಲಿ. ಯಾರಿಗೆ ಕೆಲಸ ಮಾಡಲು ಮನಸ್ಸಿಲ್ಲವೋ ಅವರು ಬೇರೆ ಕಡೆಗೆ ಹೋಗುವುದಾದಲ್ಲಿ ಕಳುಹಿಸಿ ಕೊಡುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ಎಸ್. ವೈದ್ಯ ತಿಳಿಸಿದರು.

ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಬುಧವಾರ ಮುಂಗಾರು, ಪ್ರಕೃತಿ ವಿಕೋಪ ಹಾನಿ/ಪರಿಹಾರದ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿ ಜನರ ಕಷ್ಟಕ್ಕೆ ಸ್ಪಂದಿಸಬೇಕು. ಕಚೇರಿಗೆ ಆಗಮಿಸುವ ಜನರನ್ನು ಕುರ್ಚಿಯಲ್ಲಿ ಕೂರಿಸಿ ಸಮಸ್ಯೆ ಆಲಿಸಿ ಕೆಲಸ ಮಾಡಿಕೊಡಬೇಕು. ಅದನ್ನು ಬಿಟ್ಟು ಜನರನ್ನು ಕಚೇರಿಗೆ ಅಲೆದಾಡಿಸುವುದು ಸರಿಯಲ್ಲ. ಕೆಲವೊಮ್ಮೆ ಮಾನವೀಯ ನೆಲೆಯಲ್ಲಿ ಜನರ ಕೆಲಸ ಮಾಡಿಕೊಡಬೇಕಿದೆ. ಆಗ ಜನರಲ್ಲಿ ಮನಸ್ಸಿನಲ್ಲಿ ತಾವು ಸದಾ ಇರುತ್ತೀರಿ ಎಂದ ಸಚಿವರು, ಕಚೇರಿಗಳಲ್ಲಿ ಏಜೆಂಟರ ಹಾವಳಿ ಕಡಿಮೆ ಮಾಡಿ. ಜನರ ಕೆಲಸವನ್ನು ಏಜೆಂಟರಿಲ್ಲದೇ ನೇರವಾಗಿ ಮಾಡಿಕೊಡಿ. ನಿಮಗೆ ಇಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದಾದರೆ ಬೇರೆ ಕಡೆಗೆ ವರ್ಗ ಮಾಡಿಕೊಂಡು ಹೋಗಿ. ಇದಕ್ಕೆ ನನ್ನದೇನೂ ಅಭ್ಯಂತರವಿಲ್ಲ ಎಂದರು.

ಹೊನ್ನಾವರ, ಭಟ್ಕಳದಲ್ಲಿ ಡೆಂಘೀ ಜ್ವರವನ್ನು ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳುವಂತೆ ಸಚಿವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಮಳೆಗಾಲದ ತಯಾರಿ ನಡೆಸದ ನೋಡಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು, ಕೂಡಲೇ ಎಲ್ಲೆಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಪಟ್ಟಿ ಮಾಡಿ. ಈ ಸಲ ಜನರಿಗೆ ಯಾವುದೇ ರೀತಿಯ ತೊಂದರೆ ಆದರೂ ಸಹಿಸುವುದಿಲ್ಲ ಎಂದರು.

ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಗಟಾರ ಸ್ವಚ್ಛತೆ ಕಾರ್ಯವನ್ನು ಒಂದು ವಾರದಲ್ಲಿ ಮುಗಿಸುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಸಿಟಿ ಸರ್ವೆ ಕಾರ್ಯ ವಿಳಂಬ ಮಾಡಿದ್ದಕ್ಕೆ ಎಡಿಎಲ್ಆರ್ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಸರ್ವೆ ಕಾರ್ಯ ಮುಗಿಸಲು ಇನ್ನೆಷ್ಟು ದಿನ ಬೇಕು. ಸಮರ್ಪಕ ನಕಾಶೆ ಸಿಗದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಸರ್ವೆ ಕಾರ್ಯ ಮುಗಿಸುವಂತೆ ತಾಕೀತು ಮಾಡಿದರು.

ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುವುದು ಸರಿಯಲ್ಲ. ಆದಷ್ಟು ಬೇಗ ಜಾಗ ಹುಡುಕಬೇಕು. ಇಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರನ್ನು ಬೇರೆ ಕಡೆಗೆ ವರ್ಗ ಮಾಡಲಾಗುವುದು ಎಂದು ಸಿಡಿಪಿಒಗೆ ಹೇಳಿದರು.

ಶಾಲೆ, ಅಂಗನವಾಡಿಗಳಲ್ಲಿ ಯಾವುದೇ ರೀತಿಯ ತೊಂದರೆ, ಕೊರತೆ ಆಗಬಾರದು. ಇಲ್ಲಿ ತೊಂದರೆಯಾದರೆ ಸುಮ್ಮನಿರುವುದಿಲ್ಲ. ಶಾಲೆಗಳು ದೇವಸ್ಥಾನ ಇದ್ದಂತೆ. ಇಲ್ಲಿ ಕೊರತೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು.

ಗೇರುಸೊಪ್ಪದಿಂದ ನೀರು ಬಿಡುವಾಗ ಎಚ್ಚರಿಕೆ ವಹಿಸಬೇಕು. ನೀರು ಬಿಡುವುದರಿಂದ ಜನರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು. ಜನರ ಅಭಿಪ್ರಾಯಕ್ಕೂ ಅಧಿಕಾರಿಗಳು ಮನ್ನಣೆ ನೀಡಬೇಕು ಎಂದರು.

ಹೊಸ ಅತಿಕ್ರಮಣಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ. ಆದರೆ ಹಳೇ ಅತಿಕ್ರಮಣದಾರರಿಗೆ ತೊಂದರೆ ಕೊಡಬೇಡಿ ಎಂದು ಅರಣ್ಯಾಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಇನ್ನು ಎರಡು ಮೂರು ತಿಂಗಳು ಮಳೆಗಾಲದ ಸಮಯವಾಗಿರುವುದರಿಂದ ಎಲ್ಲ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು. ಸಮಸ್ಯೆ ಉಂಟಾದಾಗ, ಜನರು ಸಮಸ್ಯೆ ಹೇಳಲು ಬಂದಾಗ ಅಧಿಕಾರಿಗಳು ತಪ್ಪಿಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಸಹಾಯಕ ಆಯುಕ್ತೆ ಡಾ. ನಯನಾ, ಭಟ್ಕಳ ತಹಸೀಲ್ದಾರ್ ನಾಗರಾಜ ನಾಯ್ಕಡ, ಹೊನ್ನಾವರ ತಹಸೀಲ್ದಾರ್‌ ರವಿರಾಜ ದೀಕ್ಷಿತ್, ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ವಿ.ಡಿ. ಮೊಗೇರ ಸೇರಿದಂತೆ ಭಟ್ಕಳ, ಹೊನ್ನಾವರ ತಾಲೂಕಿನ ಅಧಿಕಾರಿಗಳು ಉಪಸ್ಥಿತರಿದ್ದರು.

Share this article