ಕನ್ನಡಪ್ರಭ ವಾರ್ತೆ ತಿಪಟೂರು
ಅಧಿಕಾರಿಗಳಾಗಿರಬಹುದು ಅಥವಾ ಶಿಕ್ಷಕರಾಗಿರಬಹುದು ಕೆಲಸ ಮಾಡುವ ಹುದ್ದೆಗೆ ನ್ಯಾಯ ಒದಗಿಸಲು ದಕ್ಷತೆ ಮತ್ತು ಪ್ರಾಮಾಣಿಕವಾಗಿ ಶ್ರಮಿಸಿದರೆ ಹೆಸರು ತನ್ನಷ್ಟಕ್ಕೆ ತಾನೇ ಬರುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಗೋವಿಂದರಾಜು ತಿಳಿಸಿದರು.ತಾಲೂಕಿನ ಗಡಿಗ್ರಾಮವಾದ ಗಿರಿ ಕ್ಷೇತ್ರದ ಶ್ರೀ ವೆಂಕಟೇಶ್ವರ ಪ್ರೌಢಶಾಲೆ ಆವರಣದಲ್ಲಿ ನಿವೃತ್ತರಾದ ಮುಖ್ಯಶಿಕ್ಷಕ ಎಂ.ಆರ್. ಅಶೋಕ್‌ರವರಿಗೆ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ವೆಂಕಟೇಶ್ವರ ಪ್ರೌಢಶಾಲೆ ಪ್ರಾರಂಭವಾಗಿ ೪೦ ವರ್ಷ ಕಳೆದಿದೆ ಈ ಭಾಗಕ್ಕೆ ಪ್ರೌಢಶಾಲೆ ತರಲು ಈ ಭಾಗದ ಗ್ರಾಮಸ್ಥರುಗಳು ಹೋರಾಟ ನಡೆಸಿ ಪ್ರಾರಂಭಿಸಿದ್ದರು. ಈ ಶಾಲೆಗೆ ಗಣಿತ ಶಿಕ್ಷಕರಾಗಿ ಬಂದ ಮಾರುಗೊಂಡನಹಳ್ಳಿ ಗ್ರಾಮದ ಎಂ.ಆರ್. ಅಶೋಕ್ ಬಂದ ಮೇಲೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಜೊತೆಗೆ ಸಂಸ್ಕೃತಿ, ಸಂಪ್ರದಾಯ, ಧರ್ಮದ ಬಗ್ಗೆ ಮನವರಿಕೆ ಮಾಡುತ್ತಾ ಈ ಭಾಗದ ವಿದ್ಯಾರ್ಥಿಗಳಿಗೆ ಸುಂದರ ಜೀವನ ಕಟ್ಟಿಕೊಳ್ಳಲು ೩೪ ವರ್ಷಗಳಿಂದ ಪ್ರಾಮಾಣಿಕವಾಗಿ ಶ್ರಮಿಸಿರುವುದು ಶ್ಲಾಘನೀಯ ಎಂದರು. ವೆಂಕಟೇಶ್ವರ ಪ್ರೌಢಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ದೇವರಾಜ್ ಮಾತನಾಡಿ ಈ ಭಾಗದ ಗ್ರಾಮೀಣ ಮಕ್ಕಳಿಗೆ ಸುಲಭ ರೀತಿಯಲ್ಲಿ ಶೈಕ್ಷಣಿಕ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಸಿ ವಿದ್ಯಾರ್ಥಿಗಳ ಮನಸ್ಸು ಗೆದ್ದು ಅವರ ಜೀವನಕ್ಕೆ ದಾರಿ ದೀಪವಾಗಿರುವ ಎಂ.ಆರ್. ಅಶೋಕ್‌ರವರು ನಿವೃತ್ತಿಯ ನಂತರ ನಮ್ಮ ಶಾಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ವೆಂಕಟೇಶ್ವರ ಪ್ರೌಢಶಾಲೆಯ ಅಧ್ಯಕ್ಷ ದಾಸರಹಳ್ಳಿ ನಾಗರಾಜ್ ಮಾತನಾಡಿ ಗಣಿತ ಶಿಕ್ಷಣದ ಶಿಕ್ಷಕರುಗಳು ಬರುವವರೆಗೂ ಈ ಶಾಲೆಗೆ ನೀವೇ ಆಡಳಿತ ವ್ಯವಸ್ಥೆ ನೋಡಿಕೊಳ್ಳಬೇಕು. ನಿಮ್ಮ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಮನವಿ ಮಾಡಿದರು. ಮುಖಂಡ ಶಮಿವುಲ್ಲಾ ಮಾತನಾಡಿ ಗಣಿತ ಹಾಗೂ ವಿಜ್ಞಾನ ಶಿಕ್ಷಕರುಗಳು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಯಾವುದೇ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಫಲಿತಾಂಶ ಬರುತ್ತದೆ ಎಂಬುದಕ್ಕೆ ಶಾಲೆಯ ಗಣಿತ ಶಿಕ್ಷಕ ಅಶೋಕ್. ಇವರು ಈ ಶಾಲೆಗೆ ಬಂದ ಪ್ರಾರಂಭದಿಂದಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕು ಹಾಗೂ ಜಿಲ್ಲೆಗೆ ಕೀರ್ತಿ ಬಂದಿರುವುದನ್ನು ನೆನಪಿಸಿ ಅವರ ನಿವೃತ್ತಿ ಹಾಗೂ ಅವರ ೬೧ನೇ ವರ್ಷದ ಹುಟ್ಟು ಹಬ್ಬದ ಶುಭಾಶಯ ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ದೀಪ, ವೈದ್ಯಾಧಿಕಾರಿ ಡಾ. ಯುವರಾಜ್, ಉಪನ್ಯಾಸಕರುಗಳಾದ ತಮ್ಮಣ್ಣಗೌಡ, ಕೃಷ್ಣೆಗೌಡ, ನಿವೃತ್ತ ಶಿಕ್ಷಣಾಧಿಕಾರಿ ಸೋಮನಾಥ್, ಗ್ರಾಮ ಪಂಚಾಯತಿ ಸದಸ್ಯರುಗಳಾದ ದಾಸರಹಳ್ಳಿ ದೇವರಾಜ್, ಕುಮಾರ್, ಗಣೇಶ್, ನಿಂಗರಾಜು, ಶ್ರೀಮತಿ ನಳಿನ ಅಶೋಕ್, ಬೋರೆಗೌಡ, ಗಣೇಶ್, ನಿವೃತ್ತ ಉಪನ್ಯಾಸಕ ಶಾಂತಕುಮಾರ್, ನಿವೃತ್ತ ಶಿಕ್ಷಕ ಕೆಂಪಯ್ಯ, ಶಿವಕುಮಾರ್, ಜಿ ರಾಜಶೇಖರ್, ಡಿ. ಯು. ಶಿಕ್ಷಕರುಗಳಾದ ಶಿವಶಂಕರ್, ಪಿ.ಎಲ್. ಮಣಿ, ಶಿವಕುಮಾರ್, ದರ್ಶಿನಿ ನಂಜುಂಡೇಗೌಡ, ಹರ್ಷಿತಾ, ರವೀಶ್, ಕೈಲಾಸ್, ಉಮಾ. ರಾಧಾ, ಹೇಮ, ದಯಾನಂದ, ಜಮ್ಮು ಸೇರಿದಂತೆ ಹಳೆ ವಿದ್ಯಾರ್ಥಿಗಳ ಸಂಘದ ಸದಸ್ಯರುಗಳು ಮತ್ತಿತರರಿದ್ದರು.