ಕುಷ್ಟಗಿ: ಖಾದಿ, ಖಾಕಿ ಮತ್ತು ಕಾವಿ ನಿರ್ಮಲ ಮನಸ್ಸಿನಿಂದ ಶ್ರಮಿಸಿದರೆ ಜನಕಲ್ಯಾಣದ ಜತೆಗೆ ಲೋಕ ಕಲ್ಯಾಣವಾಗುವುದರಲ್ಲಿ ಸಂದೇಹ ಇಲ್ಲವೆಂದು ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ಚಳಗೇರಾ ಗ್ರಾಮದ ಹಿರೇಮಠದಲ್ಲಿ ಲಿಂ.ವಿರುಪಾಕ್ಷಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 11ನೇ ವರ್ಷದ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ಧರ್ಮ ಸಭೆ ಉದ್ಘಾಟಿಸಿ ಮಾತನಾಡಿದರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪಾವಿತ್ರ್ಯತೆ ಹೊಂದಿದೆ. ಧರ್ಮ ಮತ್ತು ಭಾವೈಕ್ಯತೆ ಭಾರತದ ಉಸಿರು ನಾಡಿನ ಮಠಗಳು, ದೇವಸ್ಥಾನಗಳು ಸಂಸ್ಕೃತಿಯ ಸಂವರ್ಧನಾ ಕೇಂದ್ರಗಳಾಗಿವೆ. ಜನ ಮನ ತಿದ್ದುವ,ರಾಷ್ಟ್ರಾಭಿಮಾನ ಬೆಳೆಸುವ ಅದ್ಭುತ ತಾಣಗಳಾಗಿವೆ ಎಂದರು.ನೀರಿನಲ್ಲಿ ಸ್ನಾನ ಮಾಡಿದರೆ ಬಟ್ಟೆ ಬದಲಿಸಬಹುದು. ಅದೇ ಬೆವರಿನಲ್ಲಿ ಸ್ನಾನ ಮಾಡಿದರೆ ಇತಿಹಾಸ ಬದಲಿಸಬಹುದು ಎಂದರು.
ಲಿಂ.ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಮಾತುಮನ ಕೃತಿಯಿಂದ ಒಂದಾಗಿ ಬಾಳಿದವರು. ಶ್ರೀಗಳವರು ಮಾಡಿದ ಪೂಜಾ ತೋರಿದ ದಾರಿ ಮತ್ತು ಭಕ್ತರ ಮೇಲಿಟ್ಟಿರುವ ವಾತ್ಸಲ್ಯ ಅವರ ಜೀವನದ ಶ್ರೇಯಸ್ಸಿಗೆ ಕಾರಣವೆಂದರೆ ತಪ್ಪಾಗದು, ಇಂದಿನ ವೀರಸಂಗಮೇಶ್ವರ ಶಿವಾಚಾರ್ಯರು ಅದೇ ದಾರಿಯಲ್ಲಿ ಮುನ್ನಡೆದು ಭಕ್ತರ ಬಾಳಿಗೆ ಬೆಳಕು ತೋರುತ್ತಿರುವುದು ಸಂತಸ ಎಂದರು.ಉಜ್ಜಯಿನಿ ಪೀಠದ ಡಾ. ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮಠ ಎನ್ನುವುದು ಕೇವಲ ಸ್ವಾಮೀಜಿಯ ನಿವಾಸ ಅಲ್ಲ, ಗುರುವಿನ ಆಶೀರ್ವಚನ, ಬೋಧನೆ ನಡೆಯುವ ಸ್ಥಳವಾಗಿದೆ. ಜಾತಿ ಬೇಧವಿಲ್ಲದೇ ವಿದ್ಯಾದಾನ, ಧರ್ಮ ಭೋದನೆ, ಬದುಕಿನ ಅರಿವನ್ನು ತೋರಿಸುವ ಸ್ಥಳವಾಗಿದೆ. ಲಿಂ. ವಿರುಪಾಕ್ಷಲಿಂಗ ಸ್ವಾಮೀಜಿ ಇಂತಹ ವ್ಯಕ್ತಿತ್ವ ಹೊಂದಿದ್ದವರು. ಗುರುವಾಗಿ ವಿದ್ಯಾದಾನ, ಸಂಸ್ಕಾರ, ಧರ್ಮ ಜಾಗೃತಿ, ಹಸಿದವರಿಗೆ ಅನ್ನ, ಬದುಕುವ ಶಕ್ತಿ ನೀಡಿರುವ ವ್ಯಕ್ತಿ, ಈ ಸಮಾಜಕ್ಕೆ ಏನು ಕೊಡಬೇಕು ಅದನ್ನೆಲ್ಲ ನೀಡಿರುವ ಮಹಾನ್ ಶಕ್ತಿ ಲಿಂಗೈಕ್ಯ ಶ್ರೀಗಳು. ನೋಂದವರಿಗೆ ಶಕ್ತಿ ತುಂಬಿದ ಸ್ಥೈರ್ಯ ತುಂಬಿದವರು, ತಾಯಿಯಂತೆ ಭಕ್ತರನ್ನು ಪೋಷಿಸಿದವರು ಉತ್ತಮ ಕಾರ್ಯದ ಮೂಲಕ ಇನ್ನಷ್ಟು ಕೊಡುಗೆ ನೀಡಲಿ ಎಂದರು.
ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಲಿಂ.ವಿರೂಪಾಕ್ಷಲಿಂಗ ಶಿವಾಚಾರ್ಯರು ಅನ್ನ, ಅರಿವು ಮತ್ತು ಆಶ್ರಯಕ್ಕೆ ಒತ್ತು ಕೊಡುವ ಮೂಲಕ ನಡೆದಾಡುವ ದೇವರಾಗಿದ್ದರು. ಅದೆ ಮಾದರಿಯಲ್ಲಿ ಈಗಿನ ಶ್ರೀಗಳು ನಡೆಸಿಕೊಂಡು ಹೋಗುತ್ತಿದ್ದು ಸಾಮೂಹಿಕ ವಿವಾಹ, ಸಾಧಕರಿಗೆ ಸನ್ಮಾನ, ಆರೋಗ್ಯ ಶಿಬಿರ ನಡೆಸುವ ಮೂಲಕ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.ಪ್ರಾಸ್ತಾವಿಕವಾಗಿ ವೀರಸಂಗಮೇಶ್ವರ ಶಿವಾಚಾರ್ಯರು ನಮ್ಮ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದ ಕಾರಣದಿಂದ ರೈತರು ಕೂಡ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟದಲ್ಲಿದ್ದಾರೆ ಹಾಗೂ ರಥದ ಕೆಲಸವೂ ವಿಳಂಬವಾಗಿದ್ದು ಮುಂದಿನ ವರ್ಷ ಪಂಚಪೀಠಾಧೀಶ್ವರರ ನೇತೃತ್ವದಲ್ಲಿ ರಥದ ಉದ್ಘಾಟನೆ ಮಾಡೋಣ ಎಂದರು.
ಈ ಸಂದರ್ಭದಲ್ಲಿ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯರು, ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಗುರುಸಿದ್ದರಾಜಯೋಗಿಂದ್ರ ಮಹಾಸ್ವಾಮಿಗಳು. ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು, ಪ್ರಭುಸಾರಂಗದೇವ ಶಿವಾಚಾರ್ಯ ಮಹಾಸ್ವಾಮಿಗಳು, ಡಾ. ಶರಣಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಜಿಪಂ ಮಾಜಿ ಸದಸ್ಯ ಕೆ. ಮಹೇಶ, ಬಿ.ಎಸ್.ಪಾಟೀಲ, ಕುಮಾರಸ್ವಾಮಿ ಹಿರೇಮಠ ಸೇರಿದಂತೆ ಅನೇಕರು ಇದ್ದರು.ಚನ್ನಯ್ಯ ಹಿರೇಮಠ ನಿರೂಪಿಸಿದರು. ಕುಮಾರಸ್ವಾಮಿ ಹಿರೇಮಠರಿಗೆ ಸಸ್ಯ ಶಿಲ್ಪಿ ಪ್ರಶಸ್ತಿ ಮತ್ತು ಪಂಚಾಕ್ಷರಿ ಹಿರೇಮಠ ಅವರಿಗೆ ವೀರಶೈವ ಯುವ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು. ಬೆಳಗ್ಗೆ ಶ್ರೀಗಳ ಮೂಲ ಕರ್ತೃ ಗದ್ದುಗೆಗೆ ಪೂಜಾ ಕಾರ್ಯಕ್ರಮ, ಅಡ್ಡಪಲ್ಲಕ್ಕಿ ಮಹೋತ್ಸವ, ಉಚಿತ ಆರೋಗ್ಯ ಶಿಬಿರ ನಡೆಯಿತು.