ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಶನಿವಾರ ಆಯೋಜಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಾರಿಗೆ ತಂದ ಮೀಸಲಾತಿಗೆ 106ರ ಸಂಭ್ರಮಾಚರಣೆ ಮತ್ತು ವೇದಿಕೆಯ 14ನೇ ವಾರ್ಷಿಕೋತ್ಸವದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಧಕರನ್ನು ಗಿಡ ಬೆಳೆಸುವ ರೀತಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಪ್ರಶಸ್ತಿ, ಪ್ರಶಂಸೆ, ಅಭಿನಂದನೆ ಇವುಗಳು ಬೆಳೆಯುವ ಬೀಜಕ್ಕೆ ಬೆಚ್ಚನೆಯ ಮಣ್ಣು, ತಂಪಾದ ನೀರು, ಸ್ಫೂರ್ತಿ ತುಂಬುವ ಸೂರ್ಯನ ಕಿರಣಗಳಿದ್ದಾಗೆ. ಸಮಾಜದ ಮಧ್ಯೆ ಕೂರಿಸಿ ಸಾಧಿಸಿದ್ದೀರಾ ಎಂದು ಪ್ರೇರೇಪಿಸುವುದು ಒಂದು ಮಹತ್ಕಾರ್ಯ ಎಂದರು.ಬದುಕಿನಲ್ಲಿ ಗುರಿ ತಲುಪಲು ಪ್ರಯತ್ನ ಮುಖ್ಯ. ಸಾಧನೆ ಯಶಸ್ಸಿನ ಒಂದು ಭಾಗ. ಮನಪೂರ್ವಕವಾಗಿ ಸಾಧಕರನ್ನು ಸನ್ಮಾನಿಸುವ ಕೆಲಸ ದೊಡ್ಡದು. ಎಲೆಮರೆಯ ಕಾಯಿ ತರ ಕಾರ್ಯ ನಿರ್ವಹಿಸುತ್ತಿರುವವರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಆರ್ಥಿಕವಾಗಿ ಸಹಾಯವಾಗದಿದ್ದರು, ಭಾವನಾತ್ಮಕವಾಗಿ ಪ್ರೋತ್ಸಾಹ ಬೆಳೆಸುತ್ತದೆ. ಒಂದು ಬೆಳಕಿನ ಮೂಲಕ ಇನ್ನಷ್ಟು ಬೆಳಕು ಹಬ್ಬಿಸುವ ಕಾರ್ಯ ಇದಾಗಿದೆ ಎಂದು ಅವರು ಶ್ಲಾಘಿಸಿದರು.
ವೈದ್ಯ ಸಾಹಿತಿ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ಸಮಾಜದಲ್ಲಿ ಮೇಲು ಕೀಳು ಎಂಬ ಭಾವೆನೆ ಬೇರೂರಿತ್ತು. ಕೆಳವರ್ಗದವರಿಗೆ ಉದ್ಯೋಗ ಮತ್ತಿತರ ಕಡೆಗಳಲ್ಲಿ ಉತ್ತಮ ಸ್ಥಾನಮಾನಗಳು ಸಿಗುತ್ತಿರಲಿಲ್ಲ. ಶಿಕ್ಷಣ ಪಡೆಯುವುದಕ್ಕೂ ಅವಕಾಶವಿರಲಿಲ್ಲ. ಆದ್ದರಿಂದ ತಳಸಮುದಾಯಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಸ್ಥಾನಮಾನ ಕಲ್ಪಿಸಿಕೊಡುವ ಉದ್ದೇಶದಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೀಸಲಾತಿಯನ್ನು ಜಾರಿಗೆ ತಂದರು ಎಂದರು.
ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ, ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಎಚ್.ಎಲ್. ಯಮುನಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮೊದಲಾದವರು ಇದ್ದರು.
- ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಸಂಸ್ಥಾನ ಮಠ