ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರ 81ನೇ ಜಯಂತ್ಯುತ್ಸವ ಹಾಗೂ 13ನೇ ವರ್ಷದ ಸಂಸ್ಮರಣಾ ಮಹೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ಸಮಯ ಯಾರನ್ನೂ ಕಾಯುವುದಿಲ್ಲ. ನಾವೇ ಸಮಯವನ್ನು ಪಾಲಿಸಬೇಕು. ಒಂದು ಪ್ರಶ್ನೆಗೆ ಒಂದೇ ಉತ್ತರ. ಆದರೆ, ಒಂದು ಉತ್ತರಕ್ಕೆ ಹಲವು ಪ್ರಶ್ನೆಗಳು. ಈ ಜಿಜ್ಞಾಸೆಗೆ ಅನೇಕ ವಿಶ್ಲೇಷಕ ಸಂಶೋಧನೆಗಳಿವೆ. ಸಿದ್ದಾರ್ಥ ಮನೆ ಬಿಟ್ಟು ಸರ್ವಸಂಗ ಪರಿತ್ಯಾಗಿಯಾಗಿ ಅಸಾಧ್ಯವನ್ನು ಸಾಧಿಸಿ ಬುದ್ಧನಾದಂತೆ ವಿದ್ಯಾರ್ಥಿಗಳು ಆಸಕ್ತಿ ಮತ್ತು ಶ್ರದ್ಧೆಯಿಂದ ವ್ಯಾಸಂಗಕ್ಕಾಗಿ ಅಧ್ಯಯನ ಮಾಡಿದರೆ ಮಾತ್ರ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದರು.ಹಾಲು, ಮೊಸರು, ಬೆಣ್ಣೆ, ತುಪ್ಪ ಇವು ಹಾಲಿನ ಉತ್ಪನ್ನಗಳಾದರೂ ಬೆಲೆ ಮತ್ತು ಬಾಳಿಕೆ ಹೆಚ್ಚು. ಅಧಿಕ ಬೆಲೆ ಮತ್ತು ದೀರ್ಘಕಾಲ ಬಾಳುವ ತುಪ್ಪವಾಗಲು ಸುಟ್ಟು ಬೆಂದು ಒತ್ತಡ ಅನುಭವಿಸಿದರೆ ಮಾತ್ರ ಸಾಧ್ಯ. ಕಾರ್ಬನ್ ವಜ್ರವಾಗುವ ಪ್ರಕ್ರಿಯೆಯನ್ನು ವಿದ್ಯಾರ್ಥಿಗಳ ಶಿಕ್ಷಣ ಪರಿಶ್ರಮಕ್ಕೆ ಹೋಲಿಸಿ ಶ್ರೀಗಳು ಅರ್ಥೈಸಿದರು.
ಅನ್ನದಾನ ಶ್ರೇಷ್ಠದಾನ. ಆದರೆ, ವಿದ್ಯಾ ದಾನ ಪರಮ ಶ್ರೇಷ್ಠದಾನ. ಆಧ್ಯಾತ್ಮಿಕ ತಳಹದಿಯ ಮೇಲೆ ವಿದ್ಯಾದಾನವನ್ನು ನೀಡುತ್ತಾ ಭಾರತದಲ್ಲಿ ಅಧಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುವ ಮಹಾಸಂಸ್ಥಾನ ಮಠಗಳಲ್ಲಿ ಆದಿಚುಂಚನಗಿರಿ ಮಠವು ಅಗ್ರಸ್ಥಾನದಲ್ಲಿದೆ ಎಂದರು.
ಆದಿಚುಂಚನಗಿರಿ ಆಸ್ಪತ್ರೆಯ ಮನೋತಜ್ಞೆ ಡಾ.ಎಸ್.ಪಿ.ವೈಭವಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು ಮಾತನಾಡಿದರು. ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಹಾಸನ ಡಿವೈಎಸ್‌ಪಿ ಸುಮಿತ್, ಸಿಪಿಐ ನಿರಂಜನ್, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎನ್.ಮಂಜುನಾಥ್ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಭಕ್ತರು ಇದ್ದರು.