ಕೃಷಿ ತಂತ್ರಜ್ಞಾನ, ಇಂಧನ ಕ್ಷೇತ್ರಗಳ ಬೆಳವಣಿಗೆಯತ್ತ ಐಐಟಿ ಚಿತ್ತ

KannadaprabhaNewsNetwork | Published : Dec 30, 2023 1:15 AM

ಸಾರಾಂಶ

ಆದ್ದರಿಂದ ಸುಸ್ಥಿರ ಬೆಳವಣಿಗೆಗೆ ಒತ್ತು ನೀಡುವ ಕ್ಷೇತ್ರಗಳಾಗಿ ಕೃಷಿ ತಂತ್ರಜ್ಞಾನದ ಜೊತೆಗೆ ಸ್ವಚ್ಛ ಇಂಧನ ಕ್ಷೇತ್ರ ಸಾಕಷ್ಟು ಬೆಳವಣಿಗೆಯಾಗಿ ಈ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಹಾಗೂ ಸಂಶೋಧನೆ ಕೈಗೊಳ್ಳಲಾಗುವುದು ಎಂದು ಡಾ. ವೆಂಕಪಯ್ಯ ದೇಸಾಯಿ ತಿಳಿಸಿದ್ದಾರೆ

- ಧಾರವಾಡ ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿಕನ್ನಡಪ್ರಭ ವಾರ್ತೆ ಧಾರವಾಡ

ಬರುವ ದಿನಗಳಲ್ಲಿ ಕೃಷಿ ತಂತ್ರಜ್ಞಾನ, ಕೈಗೆಟಕುವ ಮತ್ತು ಸ್ವಚ್ಛ ಇಂಧನ ಕ್ಷೇತ್ರಗಳ ಬೆಳವಣಿಗೆಯತ್ತ ಗಮನ ಹರಿಸುವುದಾಗಿ ಧಾರವಾಡ ಐಐಟಿ ನಿರ್ದೇಶಕ ಡಾ. ವೆಂಕಪಯ್ಯ ದೇಸಾಯಿ ಹೇಳಿದರು.

ಐಐಟಿ ಧಾರವಾಡದ ಮೊದಲ ಹಳೆಯ ವಿದ್ಯಾರ್ಥಿಗಳ ಸಮಾವೇಶಕ್ಕೂ ಮುಂಚೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈಗಾಗಲೇ ಕೃಷಿ ತಂತ್ರಜ್ಞಾನ ಬೆಳೆದರೂ ಇನ್ನೂ ತಾಂತ್ರಿಕವಾಗಿ ಈ ಕ್ಷೇತ್ರ ಬೆಳೆಯಬೇಕಿದೆ. ಆದ್ದರಿಂದ ಸುಸ್ಥಿರ ಬೆಳವಣಿಗೆಗೆ ಒತ್ತು ನೀಡುವ ಕ್ಷೇತ್ರಗಳಾಗಿ ಕೃಷಿ ತಂತ್ರಜ್ಞಾನದ ಜೊತೆಗೆ ಸ್ವಚ್ಛ ಇಂಧನ ಕ್ಷೇತ್ರ ಸಾಕಷ್ಟು ಬೆಳವಣಿಗೆಯಾಗಿ ಈ ಕ್ಷೇತ್ರಗಳಲ್ಲಿ ಹೆಚ್ಚು ಗಮನ ಹಾಗೂ ಸಂಶೋಧನೆ ಕೈಗೊಳ್ಳಲಾಗುವುದು ಎಂದರು.

2016ರಲ್ಲಿ ಶುರುವಾಗಿರುವ ಧಾರವಾಡ ಐಐಟಿಯಲ್ಲಿ ಇದು ವರೆಗೆ ನಾಲ್ಕು ಬ್ಯಾಚ್‌ನ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ. ಏಳು ವರ್ಷಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ, ಪ್ರತಿಭಾನ್ವಿತ ಭೋದಕ ವರ್ಗ ಮತ್ತು ಸಮಗ್ರ ಬೆಳವಣಿಗೆಗೆ ಸೂಕ್ತ ವಾತಾವರಣದೊಂದಿಗೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯ ಒದಗಿಸುತ್ತಿದ್ದೇವೆ ಎಂದ ಅವರು, ಇಲ್ಲಿ ವರೆಗೆ 487 ಸ್ನಾತಕಪೂರ್ವ, 20 ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿ ಪಡೆದು ಭಾರತ ಮತ್ತು ವಿದೇಶಗಳಲ್ಲಿ ವಿವಿಧ ವಲಯಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಇಲ್ಲಿ 9 ಪದವಿ ಪೂರ್ವ, ನಾಲ್ಕು ಬಿಎಸ್‌-ಎಂಎಸ್‌, ಎರಡು ಎಂಟೆಕ್‌ ಹಾಗೂ ಡಾಟಾ ಸೈನ್ಸ್‌ ಮತ್ತು ಆರ್ಟಿಫಿಶಿಯಲ್‌ ಇಂಟಲಿಜನ್ಸ್‌ ಮತ್ತು ಎಲೆಕ್ಟ್ರಿಕ್‌ ವೆಹಿಕಲ್‌ ತಂತ್ರಜ್ಞಾನದಲ್ಲಿ ಎರಡು ಕಾರ್ಯಕಾರಿ ಎಂಟೆಕ್‌ ಕಾರ್ಯಕ್ರಮ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಧಾರವಾಡ ಐಐಟಿಯಲ್ಲಿ 1163 ವಿದ್ಯಾರ್ಥಿಗಳಿದ್ದು 93 ಅಧ್ಯಾಪಕರು, 15 ಅತಿಥಿ ಉಪನ್ಯಾಸಕರು ಹಾಗೂ 69 ಬೋಧಕೇತರ ಸಿಬ್ಬಂದಿ ಇದ್ದಾರೆ. ಬೇರೆ ಬೇರೆ ಐಐಟಿಗಳನ್ನು ಗಮನಿಸಿದರೆ ಇನ್ನೂ ಹೆಚ್ಚಿನ ಅಧ್ಯಾಪಕರು ಹಾಗೂ ಬೋಧಕೇತರ ಸಿಬ್ಬಂದಿ ಅಗತ್ಯವಿದೆ. ಇದಕ್ಕಾಗಿ ಸರ್ಕಾರದ ಗಮನಕ್ಕೆ ತಂದು ನಿಯಮಾವಳಿ ಪ್ರಕಾರ ಪಡೆಯಲಾಗುವುದು ಎಂದ ಡಾ. ವೆಂಕಪ್ಪಯ್ಯ, ಪ್ರಸ್ತುತ ಡಿ. 29 ರಿಂದ 31ರ ವರೆಗೆ ಧಾರವಾಡ ಐಐಟಿ ಮೊದಲ ಹಳೆಯ ವಿದ್ಯಾರ್ಥಿಗಳ ಸಮಾವೇಶ ಮಾಡಲಾಗುತ್ತಿದೆ. ಹಳೆಯ ವಿದ್ಯಾರ್ಥಿಗಳೇ ನಮ್ಮ ಶಕ್ತಿಯಾಗಿದ್ದು, ತಾವು ಕಲಿತ ಸಂಸ್ಥೆಗೆ ಯಾವ ರೀತಿ ಕೊಡುಗೆ ನೀಡುತ್ತಾರೆ ಎಂಬುದನ್ನು ನಾವು ಅರಿಯಬೇಕಿದೆ. ದೇಶ ಹಾಗೂ ಹೊರ ದೇಶಗಳಲ್ಲಿರುವ ಕಾರಣ ಶೇ. 20ರಷ್ಟು ಮಾತ್ರ ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಧಾರವಾಡ ಐಐಟಿ ಇನ್ನೂ ಯಾವ ರೀತಿ ಬೆಳೆಯಬೇಕಿದೆ ಎಂಬುದರ ಬಗ್ಗೆಯೂ ಇಲ್ಲಿ ಚಿಂತನೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಐಐಟಿ ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ವಿ.ಆರ್‌. ದೇಸಾಯಿ, ಕೆ.ಬಿ. ಜಯಕುಮಾರ, ಸೂರ್ಯ ಪ್ರತಾಪಸಿಂಗ್‌, ವೈ.ಎಸ್‌. ನಾರಾಯಣ ಇದ್ದರು.

Share this article