ಕನ್ನಡಪ್ರಭ ವಾರ್ತೆ ಹಾಸನ
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮುಕ್ತ ಫೌಂಡೇಶನ್ ಚಿಕ್ಕಕೊಂಡಗುಳ ಇವರ ಸಂಯುಕ್ತ ಆಶ್ರಯದಲ್ಲಿ ನವೆಂಬರ್ ೧೯ರಂದು ಹಿರಿಯ ಸಾಹಿತಿ ಶೈಲಜಾ ಹಾಸನ ಅವರು ಬರೆದಿರುವ ರೈತರ ಸಂಕಷ್ಟಗಳ ಆಧಾರಿತ "ಇಳಾ " ನಾಟಕ ಪ್ರದರ್ಶನಗೊಳ್ಳಲಿದೆ. ನವೆಂಬರ್ ೧೯ರ ಮಂಗಳವಾರ ನಡೆಯುವ ನಾಟಕ ಪ್ರದರ್ಶನವನ್ನು ಸಂಸದರಾದ ಶ್ರೇಯಸ್ ಎಂ. ಪಟೇಲ್ ಉದ್ಘಾಟನೆ ನಡೆಸುವರು. ಮುಖ್ಯ ಅತಿಥಿಯಾಗಿ ಶಾಸಕ ಎಚ್.ಪಿ. ಸ್ವರೂಪ್, ಮಾಜಿ ಶಾಸಕ ಪ್ರೀತಂ ಜೆ. ಗೌಡ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ನಾಟಕ ಅಕಾಡೆಮಿ ಸಹಾಯಕ ಸದಸ್ಯ ಮಮತಾ ಅರಸೀಕೆರೆ, ಸಾಹಿತಿ ಹಾಡ್ಲಳ್ಳಿ ನಾಗರಾಜು, ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ, ಭೂಮ ವಿಜಯ ಪತ್ರಿಕೆ ಸಂಪಾದಕ ನಾಗರಾಜು ಹೆತ್ತೂರು ಇತರರು ಭಾಗವಹಿಸುವುದಾಗಿ ಹೇಳಿದರು. ಕಾದಂಬರಿಕಾರರಾದ ಶೈಲಜಾ ಹಾಸನ ಅವರು ಮಾತನಾಡಿ, ಸುಮಾರು ೨ ಗಂಟೆ ನಾಟಕ ಇದಾಗಿದ್ದು, ಮಂಗಳವಾರ ಸಂಜೆ ೫ ಗಂಟೆಗೆ ಆರಂಭವಾಗಲಿದೆ, ಸುಮಾರು ನಾಲ್ಕು ಗಂಟೆಗಳ ಅಭಿನಯದ ಕಾದಂಬರಿಯನ್ನು ಕೇವಲ ಎರಡು ಗಂಟೆಗಳಿಗೆ ಇಳಿಸಿ ಹಾಡುಗಳನ್ನು ಒಳಗೊಂಡಂತೆ ರಚಿಸಲಾಗಿದೆ ಎಂದರು. ರಂಗಭೂಮಿ ಕಲಾವಿದ ಜಯಶಂಕರ್ ಬೆಳಗುಂಬ ಅವರು ಮಾತನಾಡಿ, ೩೫ ಜನ ನಟರು ಹಾಗೂ ಸಹ ನಟರನ್ನು ಒಳಗೊಂಡ ನಾಟಕ ಇದಾಗಿದ್ದು ರೈತರ ಕಷ್ಟ ಹಾಗೂ ರೈತರ ಸಂಕಟಗಳನ್ನು ಒಳಗೊಂಡು ನಾಟಕ ರಚಿತವಾಗಿದೆ. ಉಚಿತ ಪ್ರವೇಶದಲ್ಲಿ ಈ ನಾಟಕವನ್ನು ನಡೆಸಲಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮುಕ್ತ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಸುಧಾ, ಕಲಾವಿದೆ ಮಂಜುಳಾ, ರಂಗಕರ್ಮಿ ಮತ್ತು ನಿರ್ದೇಶಕ ಜಯಶಂಕರ್ ಬೆಳಗುಂಬ, ಸುಧಾರಮೇಶ್, ಮಧುಕುಮಾರಿ, ಅಂಬುಜಾ ಇತರರು ಉಪಸ್ಥಿತರಿದ್ದರು.