ತಾಲೂಕು ಕಚೇರಿಯಲ್ಲಿ ಶೌಚಾಲಯಕ್ಕೆ ನಿರ್ವಹಣೆ ಕೊರತೆ: ಸಾರ್ವಜನಿಕರ ಪರದಾಟ

KannadaprabhaNewsNetwork | Published : Nov 17, 2024 1:18 AM

ಸಾರಾಂಶ

ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ತಹಸೀಲ್ದಾರ್‌ಗೆ ಶೌಚಾಲಯಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಒಂದೇ ದಿನದಲ್ಲಿ ಸಾರ್ವಜನಿಕರ ಶೌಚಾಲಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿ ಒಂದು ತಿಂಗಳಾದರೂ ಶೌಚಾಲಯಗಳು ಇದುವರೆಗೂ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲದಿರುವುದು ಶೋಚನೀಯ.

ಕನ್ನಡಪ್ರಭ ವಾರ್ತೆ ಕನಕಪುರ

ತಾಲೂಕು ಕೇಂದ್ರದಲ್ಲಿರುವ ಮಿನಿ ವಿಧಾನಸೌಧ ಶುಚಿತ್ವವಿಲ್ಲದೆ ಕೊಳತು ನಾರುತ್ತಿದೆ. ತಾಲೂಕು ಕಚೇರಿಗೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದೇ ಸೂರಿನಡಿ ಎಲ್ಲಾ ಇಲಾಖೆಗಳು ಸಾರ್ವಜನಿಕರಿಗೆ ‌ಸಿಗಬೇಕೆಂಬ ಪರಿಕಲ್ಪನೆಯೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಸುಸಜ್ಜಿತ ಕಟ್ಟಡ ನಿರ್ಮಿಸಲು ಶ್ರಮಿಸಿ, ಅನುಕೂಲ ಮಾಡಿಕೊಟ್ಟರು. ತಾಲೂಕಿನ ಕೂಲಿ ಕಾರ್ಮಿಕರು, ರೈತರು, ಶ್ರಮಿಕರು, ಆಧಾರ್ ಕಾರ್ಡ್ ಮಾಹಿತಿ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರ, ಕಸಬಾ ನಾಡ ಕಚೇರಿ, ಸಾಮಾಜಿಕ ಭದ್ರತೆ ಯೋಜನೆ ಹಾಗೂ ಪಿಂಚಣಿ ಮಾಹಿತಿ ಕೇಂದ್ರ, ತಾಲೂಕು ಪಂಚಾಯಿತಿ, ವಿಕಲಚೇತನರ ಸಲಹಾ ಕೇಂದ್ರಗಳಿಗೆ ನೂರಾರು ಮಂದಿ ಪ್ರತಿದಿನ ತಾಲೂಕು ಕಚೇರಿ ಹಾಗೂ ಮಿನಿ ಆವರಣದಲ್ಲಿರುವ ಮತ್ತಿತರ ಸರ್ಕಾರಿ ಕಚೇರಿಗಳಿಗೆ ಆಗಮಿಸುತ್ತಾರೆ. ದೂರದೂರುಗಳಿಂದ ಬರುವ ಸಾರ್ವಜನಿಕರಿಗೆ ಆವರಣದಲ್ಲಿ ಪ್ರಾಥಮಿಕ ಸೌಲಭ್ಯಗಳೇ ಇಲ್ಲದಿರುವುದು ವಿಪರ್ಯಾಸ.

ಮಿನಿ ವಿಧಾನಸೌಧದ ಆವರಣದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲಾಗಿದೆ. ಮಿನಿ ವಿಧಾನಸೌಧ ಸಾರ್ವಜನಿಕ ಸೇವೆಗೆ ಸಿದ್ದವಾದ ಒಂದೇ ವರ್ಷದಲ್ಲಿ, ಕಳಪೆ ಕಾಮಗಾರಿಯಿಂದ ಕೂಡಿರುವ ಶೌಚಾಲಯದ ಬಾಗಿಲು ಮುರಿದು ಬಿದ್ದಿವೆ. ನಿರ್ವಹಣೆ ಇಲ್ಲದೆ ಶೌಚಾಲಯಗಳು ದುರ್ವಾಸನೆ ಬೀರುತ್ತಿವೆ. ಕಚೇರಿಗೆ ಬರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಮಹಿಳೆಯರು ಶೌಚಕ್ಕೆ ಹೋಗಲು ಕಷ್ಟ ಅನುಭವಿಸುವಂತಾಗಿದೆ.

ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ತಹಸೀಲ್ದಾರ್‌ಗೆ ಶೌಚಾಲಯಗಳನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಒಂದೇ ದಿನದಲ್ಲಿ ಸಾರ್ವಜನಿಕರ ಶೌಚಾಲಯಗಳನ್ನು ಸರಿಪಡಿಸುವುದಾಗಿ ಭರವಸೆ ನೀಡಿ ಒಂದು ತಿಂಗಳಾದರೂ ಶೌಚಾಲಯಗಳು ಇದುವರೆಗೂ ಸಾರ್ವಜನಿಕ ಸೇವೆಗೆ ಲಭ್ಯವಿಲ್ಲದಿರುವುದು ಶೋಚನೀಯ.

ಕಚೇರಿಗೆ ಬರುವ ಸಾರ್ವಜನಿಕರು ವಿಧಿ ಇಲ್ಲದೆ ಪಕ್ಕದಲ್ಲಿರುವ ವಿದ್ಯುತ್ ಘಟಕದ ಟಿಸಿ ಪಕ್ಕದಲ್ಲಿ ಶೌಚ ಮಾಡಲು ಹೋಗುತ್ತಿದ್ದು, ಟಿಸಿಯ ಸುತ್ತಲೂ ಹಸಿರು ಗಿಡಗಂಟಿಗಳು ಬೆಳೆದಿವೆ. ಇಲ್ಲಿ ಹಾವು ಇತ್ಯಾದಿ ವಿಷಕಾರಕಗಳಿದ್ದು, ಕಚ್ಚುವ ಅಪಾಯವಿದೆ. ಹಾಗೆಯೇ ವಿದ್ಯುತ್‌ ಪ್ರವಹಿಸುವ ಅಪಾಯವೂ ಇದೆ. ಆದ್ದರಿಂದ ಸಾರ್ವಜನಿಕರಿಗೆ ನೆರವಾಗುವಂತೆ ಮಿನಿ ವಿಧಾನಸೌಧದ ಆವರಣದಲ್ಲಿರುವ ಶೌಚಾಲಯಗಳನ್ನು ದುರಸ್ತಿ ಮಾಡಿಸಬೇಕು. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರನ ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Share this article