ಕನ್ನಡಪ್ರಭ ವಾರ್ತೆ ಇಳಕಲ್ಲ
ಇಳಕಲ್ಲ ನಗರದ ನೇಕಾರ ಕಾಲೋನಿಯ ಯುವಕ ಮಹಮ್ಮದ್ ಅಜರುದ್ದೀನ್ ಮೆಹಬೂಬ್‌ಸಾಬ್ ಹಾಲ್ಯಾಳ ಯುಪಿಎಸ್‌ಸಿ ನಡೆಸುವ ಸಿಎಪಿಎಫ್ (ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್) ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಅಸಿಸ್ಟಂಟ್ ಕಮಾಂಡರ್ ಹುದ್ದೆಗೆ ಆಯ್ಕೆಯಾಗಿದ್ದಾನೆ.
ಹಾಲ್ಯಾಳ ಕುಟುಂಬ ಮೂಲತಃ ನೇಕಾರಿಕೆ ಕುಟುಂಬ. ಯುವಕನ ತಂದೆ ಮೆಹಬೂಬ್ ಸಾಬ್ ಕೈಮಗ್ಗ ನೇಕಾರಿಕೆ ಮಾಡುತ್ತಿದ್ದರು. ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಕೊನೆಯ ಮಗನಾದ ಮಹಮ್ಮದ ಅಜುರುದ್ದೀನ್ ಚಿಕ್ಕವನಿದ್ದಾಗಲೇ ತಂದೆ ಅಕಾಲಿಕ ನಿಧನರಾದರು. ಹಿರಿಯಣ್ಣ ಮೊಹಮ್ಮದ್ ಹುಸೇನ್ ಹಾಗೂ ಚಿಕ್ಕಪ್ಪ ಫಕ್ರುದ್ದಿನ್ ಅವರು ಕುಟುಂಬದ ಜವಾಬ್ದಾರಿ ವಹಿಸಿಕೊಂಡು ಪ್ರತಿಭಾವಂತನಿದ್ದ ಮಹಮ್ಮದ ಅಜರುದ್ದಿನ್ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡರು.ಇಳಕಲ್ಲಿನ ಮಹಾಂತ ಗುರುಗಳ ಶಾಲೆಯಲ್ಲಿ 1 ರಿಂದ 7 ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಮುಗಿಸಿದ ಮೊಹಮ್ಮದ ಅಜರುದ್ದೀನ್ 4-5ನೇ ತರಗತಿಯಲ್ಲಿದ್ದಾಗ ಜಿ.ಜಿ. ರೇಶ್ಮಿ ಗುರುಗಳ ಬಳಿ ನವೋದಯ ಕೋಚಿಂಗ್ ಪಡೆದು ನವೋದಯ ಪರೀಕ್ಷೆ ಪಾಸಾಗಿ 6ರಿಂದ 12 ತರಗತಿಯವರೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಜವಾಹರ ನವೋದಯ ಶಾಲೆಯಲ್ಲಿ ಅಧ್ಯಯನ ಮಾಡಿ ಸಿಇಟಿಯಲ್ಲಿ ರ್‍ಯಾಂಕ್ ಪಡೆದು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ 4 ವರ್ಷ ಬಿಎಸ್ಸಿ ಅಗ್ರಿ ಶಿಕ್ಷಣ ಮುಗಿಸುತ್ತಾರೆ.ಬಳಿಕ ಮುಂಬಯಿ ಹಜ್ ಕಮಿಟಿ ಆಫ್ ಇಂಡಿಯಾ ನಡೆಸುವ ಯುಪಿಎಸ್‌ಸಿ ತರಬೇತಿ ಕೇಂದ್ರಕ್ಕೆ ಆಯ್ಕೆಯಾಗಿ ಎರಡು ವರ್ಷ ಉಚಿತ ತರಬೇತಿ ಪಡೆಯುತ್ತಾರೆ. ಬಳಿಕ ಮುಂಬಯಿಯ ಜಾಮಿಯಾ ಮಿಲಿಯಾ ಇಸ್ಲಾಂ ಶಿಕ್ಷಣ ಸಂಸ್ಥೆಯಲ್ಲಿ 2 ವರ್ಷ ಯುಪಿಎಸ್ಸಿ ತರಬೇತಿ ಪಡೆದ. ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸಾಗುವಲ್ಲಿ ವಿಫಲನಾಗಿ 3ನೇ ಬಾರಿ ಪರೀಕ್ಷೆಗೆ ತಯಾರಿ ನಡೆಸಿದ್ದ. ಆದರೆ ತಂದೆಯ ಅಕಾಲಿಕ ನಿಧನದಿಂದ ಮಾನಸಿಕವಾಗಿ ಕುಂದಿದ್ದ ಮಹಮ್ಮದ ಪರೀಕ್ಷೆ ಬರೆಯಲಿಲ್ಲ. ಮತ್ತೆ ಅಧ್ಯಯನ ಮಾಡಿ 2023ರಲ್ಲಿ 4ನೇ ಬಾರಿಗೆ ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದ. ೨೦೨೪ ಜುಲೈ 5ರಂದು ಫಲಿತಾಂಶ ಪ್ರಕಟವಾಗಿದ್ದು, ೧೬೩ನೇ ರ್‍ಯಾಂಕ್ ಪಡೆದು ಸಿಎಎಸ್‌ಎಫ್‌ನಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಹುದ್ದೆಗೆ ಆಯ್ಕೆಯಾಗಿದ್ದಾನೆ.
ಮಹಮ್ಮದ ಅಜರುದ್ದಿನ್‌ಸಾಬ ಹಾಲ್ಯಾಳಗೆ ಗುರುಮಹಾಂತ ಶ್ರೀಗಳು. ಮುರ್ತುಜಾ ಖಾದ್ರಿ ದರ್ಗಾ ಗುರುಗಳು, ಶಾಸಕ ವಿಜಯಾನಂದ ಕಾಶಪ್ಪನವರ. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಮಾಜ ಸೇವಕ ಎಸ್.ಆರ್. ನವಲಿಹಿರೇಮಠ ಹಾಗು ನಗರದ ಸಂಘ ಸಂಸ್ಥೆಯವರು ಅಭಿನಂದಿಸಿದ್ದಾರೆ.