ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಹಾಗೂ ಸಿಸಿ ಸಲುವಾಗಿ ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡದೇ ಇರುವ ರಾಜ್ಯ ಸರ್ಕಾರ ಹಾಗೂ ಹುಬ್ಬಳ್ಳಿ ವಿದ್ಯುತ್ ನಿಗಮದ ನಡೆ ಖಂಡನೀಯವಾಗಿದೆ. ಇದರ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡು ಸಂಪೂರ್ಣ ವಿಫಲವಾಗಿವೆ. ಈಗಲಾದರೂ ವಿರೋಧ ಪಕ್ಷದವರು ಎಚ್ಚೆತ್ತು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಮಲ್ಲಿಕಾರ್ಜುನ ಕೆಂಗನಾಳ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಿಂದ ಸಾರ್ವಜನಿಕರಿಗೆ ಆಗುವ ವಿವಿಧ ತೊಂದರೆ ಹಾಗೂ ಅಧಿಕಾರಿಗಳಿಂದ ವಿದ್ಯುತ್ ನಿಗಮ ಮತ್ತು ಸರ್ಕಾರಕ್ಕೆ ಆಗುವ ಆರ್ಥಿಕ ನಷ್ಟ ಸರಪಡಿಸಬೇಕೆಂದು ಕೆಇಬಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ವಿದ್ಯುತ್ ನಿಗಮದ ಅಧಿಕಾರಿಗಳ ಮೂಲಕ ಇಂಧನ ಸಚಿವರು, ಹುಬ್ಬಳ್ಳಿ ವಿದ್ಯುತ್ ನಿಗಮದ ಅಧ್ಯಕ್ಷರಿಗೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ನಮ್ಮ ಬೇಡಿಕೆಗಳನ್ನು ಒಂದು ವೇಳೆ ಈಡೇರಿಸದಿದ್ದರೇ ಮುಂದಿನ ದಿನಗಳಲ್ಲಿ ರೈತರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಕೆಇಬಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರ ಪಂಪ್‌ಸೆಟ್‌ಗಳಿಗೆ ಸರ್ವಿಸ್ ಮೇನ್‌ಗಳಲ್ಲಿ ಬರುವ ಸ್ಥಾವರಗಳಿಗೆ ದಂಡವನ್ನು ತುಂಬಿಸಿಕೊಳ್ಳದೇ ಕೇವಲ ಮುಂಗಡ ಹಣವನ್ನು ತುಂಬಿಸಿಕೊಂಡು ವಿದ್ಯುತ್ ಸಂಪರ್ಕ ನೀಡಬೇಕು. ಶೀಘ್ರ ಸಂಪರ್ಕ ಯೋಜನೆಯ ಅಡಿಯಲ್ಲಿ ವಿದ್ಯುತ್ ಪರಿವೀಕ್ಷಕರು ₹3600 ರಿಂದ ₹10, 400 ರವರೆಗೆ ಜಾಸ್ತಿ ಮಾಡಿದ್ದು ಕೂಡಲೇ ಅದನ್ನು ಹಿಂಪಡೆಯಬೇಕು. ಸ್ಮಾರ್ಟ್ ಮೀಟರ್ ದರವನ್ನು ಪುನರ್ ಪರಿಶೀಲಿಸಿ ಕಡಿಮೆ ಮಾಡಬೇಕು. ತಾತ್ಕಾಲಿಕ ವಿದ್ಯುತ್ ಸ್ಥಾವರಗಳ ಮುಂಗಡ ಹಣವನ್ನು ಎರಡು ಪಟ್ಟು ತುಂಬಿಸಿಕೊಳ್ಳುತ್ತಿದ್ದು, ಮೊದಲಿನ ಹಾಗೆ ಯಥಾ ಸ್ಥಿತಿ ಮುಂದುವರೆಸಬೇಕು. ಎಎಸ್‌ಡಿ ಹಣವನ್ನು ಒಂದೇ ಕಂತಿನಲ್ಲಿ (₹48.101) ಹೆಡ್‌ನಲ್ಲಿ ತುಂಬಿಸಿಕೊಳ್ಳಬೇಕು. 1200 ಚದುರ ಅಡಿ ಮೇಲ್ಪಟ್ಟ ನಿವೇಶನಗಳಿಗೆ ಸೋಲಾರ್ ರಿಬೆಟ್ ನೀಡಬೇಕು. ಇಲ್ಲದಿದ್ದರೇ ಸೋಲಾರ್ ನಿಯಮಗಳನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯುತ್ ನಿಗಮಗಳು ನಷ್ಟ ಅನುಭವಿಸುತ್ತಿವೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ರೈತರ ಸುಟ್ಟ ಟಿಸಿ ಗಳನ್ನು 24 ಗಂಟೆಯೊಳಗೆ ರಿಪೇರಿ ಮಾಡಿ ಕೊಡುಬೇಕು. ವಿದ್ಯುತ್ ಸಂಪರ್ಕವನ್ನು ಎಲ್ಲ ಕಂಪನಿಗಳು ನೀಡಬೇಕು. ಇಲ್ಲವೇ ನೇರ ಸಂಪರ್ಕವನ್ನು ಹಾಕಿಕೊಳ್ಳಲು ಅನುಮತಿ ನೀಡಬೇಕು. ಹೆಸ್ಕಾಂ ಜಾಗೃತ ದಳದವರು ಇನ್ನು ಮೇಲಿಂದ ಯಾವುದೇ ಕೇಸ್‌ಗಳನ್ನು ಹಾಕಬಾರದೆಂದು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ವಿಜಯಪುರ ಹೆಸ್ಕಾಂ ಗ್ರಾಮೀಣ ಉಪವಿಭಾಗವನ್ನು ಯಾರಿಗೂ ಹೇಳದೆ ಕೇಳದೇ ಶಿವಗಿರಿಗೆ ಸ್ಥಳಾಂತರ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹಾಗೆಯೇ ಇದಲ್ಲಿರುವ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಇದನ್ನು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಕೂಡಲೇ ಗ್ರಾಮೀಣ ಕಚೇರಿಯನ್ನು ಪುನಃ ಮೊದಲಿದ್ದ ಸ್ಥಳದಲ್ಲಿಯೇ ಮುಂದುವರೆಸಬೇಕು. ಇನ್ನೊಂದು ನಗರ ಉಪವಿಭಾಗ ಶಿವಗಿರಿಯಲ್ಲಿ ಮಾಡಿ ಅಲ್ಲಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಬಟಗಿ, ಹರೀಶ ಕುಲಕರ್ಣಿ, ಬಸವರಾಜ ಬಸವರಾಜ ಕುರುಹಿನಶೆಟ್ಟಿ, ಭಜರಂಗ ಗುಂಡಯ್ಯ ಶಿಂಧೆ, ಸಂಜೀವ ಕುಮಾರ, ಗುರುನಾಥ ವಾಲಿಕರ, ಪ್ರೇಮಾನಂದ ಕೋಟ್ಯಾಳ, ಇಸ್ಮಾಯಿಲ್ ಸುತಾರ, ಗದಿಗೆಪ್ಪ ವಾಲಿಕಾರ, ಬಸವರಾಜ ಶಿವಣಗಿ, ಶಿವ ತೆಲಸಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹೊಸ ವಿದ್ಯುತ್ ಸಂಪರ್ಕಕ್ಕಾಗಿ ಒಸಿ ಹಾಗೂ ಸಿಸಿ ಸಲುವಾಗಿ ಸಾರ್ವಜನಿಕರಿಗೆ ವಿದ್ಯುತ್ ಸಂಪರ್ಕ ನೀಡದೇ ಇರುವ ರಾಜ್ಯ ಸರ್ಕಾರ ಹಾಗೂ ಹುಬ್ಬಳ್ಳಿ ವಿದ್ಯುತ್ ನಿಗಮದ ನಡೆ ಖಂಡನೀಯವಾಗಿದೆ. ಇದರ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡು ಸಂಪೂರ್ಣ ವಿಫಲವಾಗಿವೆ. ಈಗಲಾದರೂ ವಿರೋಧ ಪಕ್ಷದವರು ಎಚ್ಚೆತ್ತು ಸದನದಲ್ಲಿ ಧ್ವನಿ ಎತ್ತಬೇಕು.ಮಲ್ಲಿಕಾರ್ಜುನ ಕೆಂಗನಾಳ, ರಾಜ್ಯಾಧ್ಯಕ್ಷರು, ರೈತ ಭಾರತ ಪಕ್ಷ ಕರ್ನಾಟಕ.