ಹಾವೇರಿ: ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿದ್ದು, ಗಾಂಜಾ ಮಾರಾಟ, ಜೂಜು, ಮಟ್ಕಾ, ಇಸ್ಪೀಟ್ ದಂಧೆ ನಡೆಯುತ್ತಿದೆ. ಹಾನಗಲ್ಲ ತಾಲೂಕಿನಲ್ಲಂತೂ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅಕ್ರಮ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಕಿಡಿಕಾರಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮರಾಟ ನಡೆದಿದೆ. ಮಟ್ಕಾ ವಿಪರೀತವಾಗಿದೆ. ಇದರಿಂದ ಮಹಿಳೆಯರು ಬಾಳು ಬೀದಿಗೆ ಬರುವಂತಾಗಿದೆ. ಜನರ ಸಂಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಅಧಿಕಾರಕ್ಕೆ ಬಂದು 2 ವರ್ಷ 2 ತಿಂಗಳಲ್ಲೇ ಈ ಸರ್ಕಾರ ಜನರ ಮನಸ್ಸಿನಿಂದ ದೂರವಾಗಿದೆ. ಈ ಸರ್ಕಾರದಲ್ಲಿ ಬಗೆದಷ್ಟೂ ಆಳಕ್ಕೆ ಹೋಗುವ ಪ್ರಕರಣಗಳಿವೆ. ಕೂಡಲೇ ಸರ್ಕಾರ ಜನಾದೇಶಕ್ಕೆ ಹೋಗಲಿ, ಆಗ 140 ಸೀಟುಗಳ ದುರಂಹಕಾರವನ್ನು ಇಳಿಸಿ, ಜನರು ಪಾಠ ಕಲಿಸಲಿದ್ದಾರೆ ಎಂದರು.ಹಾನಗಲ್ಲ ತಾಲೂಕಿನಲ್ಲಿ ಅಪರಾಧಗಳ ಪ್ರಕರಣ ಹೆಚ್ಚುತ್ತಿವೆ. ಅಲ್ಲಿ ಜನರಿಗೆ ರಕ್ಷಣೆ ಇಲ್ಲವಾಗಿದೆ. ಅಲ್ಲಿನ ಬ್ಯಾಗವಾದಿ ಗ್ರಾಮದಲ್ಲಿ ಮಹಿಳೆಯರ ಮಾರಾಟ ಜಾಲದ ಅಕ್ರಮ ಕೂಟ ಸಕ್ರಿಯವಾಗಿದ್ದು, ಅದನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಹೋರಾಟಕ್ಕೆ ಮುಂದಾಗಲಿದೆ ಎಂದರು. ಅಲ್ಲದೇ ಹಾನಗಲ್ಲ ತಾಲೂಕಿನಲ್ಲಿ ವಿರೋಧ ಪಕ್ಷದ ಕಾರ್ಯಕರ್ತರ ಮೇಲೆ ಜಾತಿನಿಂದನೆ, ದೌರ್ಜನ್ಯ, ಹಲ್ಲೆ ನಡೆಸುವ ಮೂಲಕ ಭೀತಿ ಮೂಡಿಸುವ ಕೆಲಸ ನಡೆದಿದೆ. ಅದಕ್ಕೆ ಸ್ಥಳೀಯ ಶಾಸಕರೂ ಸಾಥ್ ನೀಡುತ್ತಿದ್ದು, ದುಷ್ಟಕೂಟ ನಿರ್ಮಿಸಿಕೊಂಡು ಅಪರಾಧಿಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಹಾನಗಲ್ಲ ಕ್ಷೇತ್ರ ಅಪರಾಧ ಕೃತ್ಯಗಳಿಗೆ ಹೆಸರಾಗುತ್ತಿದೆ. ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗ್ಯಾಂಗ್‌ರೇಪ್ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆದಿತ್ತು. ಈಗಲೂ ಅದನ್ನು ರಾಜಿ ಪಂಚಾಯಿತಿ ಮೂಲಕ ಮುಚ್ಚಿ ಹಾಕುವ ಕುಕೃತ್ಯಗಳಿಗೆ ಯತ್ನ ನಡೆದಿದೆ ಎಂದು ದೂರಿದ ಅವರು, ರೈತರ ಆತ್ಮಹತ್ಯೆ, ಗೊಬ್ಬರದ ಕೊರತೆ, ಕಳಪೆ ರಸಗೊಬ್ಬರ ಹೀಗೆ ಜಿಲ್ಲೆಯಲ್ಲಿ ಹತ್ತಾರು ಸಮಸ್ಯೆಗಳಿವೆ. ಈ ಕುರಿತು ಜಿಲ್ಲೆಯ ಶಾಸರ‍್ಯಾರು ಮಾತನಾಡುತ್ತಿಲ್ಲ ಎಂದು ಹರಿಹಾಯ್ದರು. ಜಿಲ್ಲೆ ಜೂಜೂಕೋರರ ಅಡ್ಡಾ ಆಗುತ್ತಿದೆ, ಗಾಂಜಾ ಸೇವನೆ ಮತ್ತು ಮಾರಾಟ ಎಗ್ಗಿಲ್ಲದೇ ಹೆಚ್ಚಿದೆ, ಇನ್ನು ಓಸಿ ಬರೆಯುವವರು ಮಾಸಿಕ ₹25 ಲಕ್ಷ ಹಣವನ್ನು ಮಾಮೂಲಿ ನೀಡುವ ಸ್ಥಿತಿ ಇದೆ. ಇದರಲ್ಲಿ ಪೊಲೀಸರು ಮತ್ತು ಶಾಸಕರಿಗೂ ಪಾಲಿದೆ ಎನ್ನಲಾಗುತ್ತಿದೆ. ಅವರಿಗೆ ಪಾಲಿಲ್ಲ ಎನ್ನುವುದಾದರೂ ಅವುಗಳನ್ನು ತಡೆಯಲು ಏಕೆ ಮುಂದಾಗುತ್ತಿಲ್ಲ. ಅವಕ್ಕೆ ಕಡಿವಾಣ ಏಕೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿದರು.ಸುದ್ದಿಗೋಷ್ಠಿಯಲ್ಲಿ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ, ಮುಖಂಡರಾದ ಬಸವರಾಜ ಅರಬಗೊಂಡ, ಜಗದೀಶ ಬಸೇಗಣ್ಣಿ, ನಾಗೇಂದ್ರ ಕಟಕೋಳ, ಗವಿಸಿದ್ದಪ್ಪ ದ್ಯಾಮಣ್ಣನವರ, ಪರಮೇಶಪ್ಪ ಮೇಗಳಮನಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ ಇದ್ದರು.