ಹಾಸನ : ಇಲ್ಲಿನ ವಿದ್ಯಾನಗರದಲ್ಲಿ ಇರುವ ಖ್ಯಾತ ಚಲನಚಿತ್ರ ನಟ ಯಶ್ ಅವರ ತಾಯಿ ಪುಷ್ಪಾ ಅವರ ನಿವಾಸದ ಪಕ್ಕದ ನಿವೇಶನಕ್ಕೆ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಜೆಸಿಬಿ ಮೂಲಕ ಕಾಂಪೌಂಡ್ ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.
ಲಕ್ಷ್ಮಮ್ಮ ಎಂಬುವರಿಗೆ ಸೇರಿರುವ ಜಾಗದಲ್ಲಿ ಅಕ್ರಮವಾಗಿ ಸುಮಾರು ಒಂದೂವರೆ ಸಾವಿರ ಅಡಿ ವ್ಯಾಪ್ತಿಯಲ್ಲಿ ಕಾಂಪೌಂಡ್ ಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಲಕ್ಷ್ಮಮ್ಮ ಅವರ ಜಿಪಿಎ ಹೋಲ್ಡರ್ ದೇವರಾಜು ಅವರು ನ್ಯಾಯಾಲಯದ ಅನುಮತಿಯ ಮೇರೆಗೆ ಈ ಕಾಂಪೌಂಡ್ಅನ್ನು ತೆರವುಗೊಳಿಸಿದ್ದಾರೆ.
ಬೆಳ್ಳಂಬೆಳಿಗ್ಗೆ ನಡೆದ ಈ ಕಾರ್ಯಾಚರಣೆಯಿಂದ ವಿದ್ಯಾನಗರ ಪ್ರದೇಶದಲ್ಲಿ ಕೆಲಕಾಲ ಗೊಂದಲ ಉಂಟಾಗಿದ್ದು, ಸ್ಥಳಕ್ಕೆ ಸಾರ್ವಜನಿಕರು ಹಾಗೂ ಇತರರು ಆಗಮಿಸಿದ್ದರು.
ಈ ವೇಳೆ, ದೇವರಾಜು ಅವರು ಮಾಧ್ಯಮದೊಂದಿಗೆ ಮಾತನಾಡಿ, ಪುಷ್ಪಾ ಅವರ ನಿವಾಸದ ಪಕ್ಕದಲ್ಲಿರುವ ನಮ್ಮ ಮೂಲ ಜಮೀನಿನೊಳಗೆ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದರು. ನ್ಯಾಯಾಲಯದ ಆದೇಶದಂತೆ ಭಾನುವಾರ ಕಾಂಪೌಂಡ್ ತೆರವು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪುಷ್ಪ ಅವರ ವಕೀಲ ಸಂಜಯ್, ಅಕ್ರಮವಾಗಿ ಬಂದು ಕಾಂಪೌಂಡ್ ಒಡೆಯಲಾಗಿದೆ. ಕೋರ್ಟ್‌ನಲ್ಲಿ ಇಂತಹ ಯಾವುದೇ ಆದೇಶ ಇಲ್ಲ. ನ್ಯಾಯಾಲಯದಲ್ಲಿ ಪ್ರಕರಣ ಇರುವಾಗಲೇ ಈ ರೀತಿ ಅತಿಕ್ರಮಣ ಮಾಡಿದ್ದಾರೆ ಎಂದು ದೂರಿದ್ದಾರೆ.