ಹುಬ್ಬಳ್ಳಿ: ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಕೈಗೊಳ್ಳುವ ಕಾರ್ಯಗಳ ಕುರಿತು ಜನರಿಗೆ ತಿಳಿಸುವ 4ನೇ ಅಂಗ ಮಾಧ್ಯಮದ ಕಾರ್ಯ. ವಸ್ತುನಿಷ್ಠ ವರದಿಗೆ ಇಂದಿಗೂ ಎಂದೆಂದಿಗೂ ಜನಪ್ರಿಯತೆಯಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಮೌಲ್ಯಾಧಾರಿತ ರಾಜಕಾರಣ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಹುಟ್ಟಿಕೊಂಡಿತು. ಅವರೊಂದಿಗೆ ಅದು ಅಂತ್ಯವಾಯಿತು. ಇಂದು ಎಲ್ಲ ಕ್ಷೇತ್ರಗಳಲ್ಲೂ ಮೌಲ್ಯ ಕಡಿಮೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಋಣ ಎಂಬುದು ದೊಡ್ಡದು. ಜೀವನದಲ್ಲಿ ಮೌಲ್ಯಗಳನ್ನು ಕಲಿಸಿದ ಗುರು ನನ್ನ ತಂದೆ. ಜನ್ಮನೀಡಿದ ತಂದೆ- ತಾಯಿ, ಹುಟ್ಟಿದ ಊರು, ಕಲಿಸಿದ ಶಾಲೆಯ ಋಣ ತೀರಿಸುವ ಕೆಲಸ ಮಾಡಿದ್ದೇನೆ. ಈ ರಾಜಕೀಯ ಕ್ಷೇತ್ರ ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡೆ. ಶಿಕ್ಷಕರಿಗಾಗಿ ನಡೆದ ಹೋರಾಟ, ಚುನಾವಣಾ ಸಂದರ್ಭದಲ್ಲಿ ನಡೆದ ಶಿಕ್ಷಕರ ಸಭೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರು.ಶಿಕ್ಷಕರು ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಅದನ್ನು ಕಳೆದುಕೊಳ್ಳಬೇಡ ಎಂದು ಹಿತೈಷಿಯೊಬ್ಬರು ಹೇಳಿದ್ದರು. ಅದನ್ನು ಪ್ರತಿನಿತ್ಯವೂ ನೆನಪಿಸಿಳ್ಳುತ್ತೇನೆ. ಇಷ್ಟು ವರ್ಷಗಳಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯಿಲ್ಲದೇ ರಾಜಕಾರಣ ಮಾಡಿದ ತೃಪ್ತಿ ನನಗಿದೆ. ಶಿಕ್ಷಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಅವರ ಮತ್ತು ನನ್ನ ಸಂಬಂಧ ಇಂದಿಗೂ ಕುಟುಂಬದ ರೀತಿಯಂತಿದೆ ಎಂದರು.
ಧಾರವಾಡ ಕವಿವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಸಂಜೀವಕುಮಾರ ಮಾಲಗತ್ತಿ ಮಾತನಾಡಿ, ಇಂದು ಪತ್ರಿಕೋದ್ಯಮ ಸಾಕಷ್ಟು ಬದಲಾಗಿದೆ. ಮುಂದೆ ಇನ್ನೂ ಬದಲಾಗಿದೆ. ತಂತ್ರಜ್ಞಾನದ ಪರಿಣಾಮ ಪತ್ರಿಕೋದ್ಯಮದ ಕಲಿಕೆ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಸೃಜನಶೀಲತೆ ಕಳೆದುಕೊಳ್ಳುತ್ತಿದ್ದಾರೆ ಎಂದರು.