ಪಕ್ಷದ ವತಿಯಿಂದ ₹5 ಲಕ್ಷ ಪರಿಹಾರಧನ ವಿತರಣೆ
ಪಟ್ಟಣದ ಕಾಳಮ್ಮನಗರದಲ್ಲಿ ಕೊಲೆಯಾದ ರಂಜಿತಾ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾನುವಾರ ಸಂಜೆ ಭೇಟಿ ನೀಡಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು, ಪಕ್ಷದ ವತಿಯಿಂದ ₹5 ಲಕ್ಷ ಪರಿಹಾರಧನ ವಿತರಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ದಲಿತ, ಹಿಂದುಳಿದ, ಬಡ ಹಿಂದೂ ಮಹಿಳೆಯ ಬರ್ಬರ ಕೊಲೆ ಖಂಡನೀಯ. ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ಇದಕ್ಕೆ ಸರ್ಕಾರ ಬೇರೆ ಬಣ್ಣ ಬಳಿಯದೇ ಸೂಕ್ತ ತನಿಖೆ ನಡೆಸಿ, ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.ರಾಜ್ಯದ ಗೃಹ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿರುವುದರಿಂದ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿವೆ. ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಈ ಘಟನೆ ಆಗಿರುವುದು ಖೇದಕರ. ಮೃತ ರಂಜಿತಾ ಕುಟುಂಬಕ್ಕೆ 2 ಎಕರೆ ಜಮೀನು, ₹50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.ಬಿಜೆಪಿಯವರು ಏನು ಮಾತನಾಡಿದರೂ ಸರ್ಕಾರ ಕೋಮುವಾದಿಗಳೆಂಬ ಪಟ್ಟ ನೀಡುತ್ತದೆ. ಇಂತಹ ಘಟನೆಗಳು ನಡೆದಾಗ ತನಿಖೆ ಮುನ್ನವೇ ಲವ್ ಜಿಹಾದ್ ಅಲ್ಲ ಎಂದು ಘೋಷಿಸುತ್ತದೆ. ಸರ್ಕಾರ ಕೈಕಟ್ಟಿ ಕುಳಿತಿರುವುದರಿಂದಲೇ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿವೆ ಎಂದು ಟೀಕಿಸಿದರು.ದೇಶದ್ರೋಹಿಗಳ ಪೋಷಿಸುತ್ತಿರುವ ಕಾಂಗ್ರೆಸ್ ಸರ್ಕಾರ: ಆರೋಪರಾಜ್ಯ ಸರ್ಕಾರ ನಿಷ್ಕ್ರಿಯಗೊಂಡಿದ್ದು, ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ಪೋಷಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
ಪ್ರಸ್ತುತ ಜಿಪಂ, ತಾಪಂ, ಗ್ರಾಪಂ ಚುನಾವಣೆಯ ಸಿದ್ಧತೆ ಮಾಡಬೇಕಾಗಿದೆ. ಪ್ರತಿ ಜಿಲ್ಲೆಗೆ ಹೋಗಲಿದ್ದೇನೆ. ಉತ್ತರ ಕನ್ನಡದಲ್ಲಿ ಜ. 9ರಂದು ಪ್ರವಾಸ ಮಾಡಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಮಾತನಾಡಿ, ಎಷ್ಟೇ ಕಾರ್ಯಗಳ ಒತ್ತಡ ಇದ್ದರೂ ರಾಜ್ಯಾಧ್ಯಕ್ಷರು ಸಾಮಾನ್ಯ ಮಹಿಳೆಯ ಹತ್ಯೆಯ ಬಗ್ಗೆ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಯಲ್ಲಾಪುರದ ಸಂಘಟನೆಗಳು ಉತ್ತಮ ಸಂಘಟನೆಯ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ನಾವು ಪಕ್ಷ ಬಲಪಡಿಸಬೇಕಾಗಿದೆ ಎಂದರು.