ಅಕ್ರಮ ಕಟ್ಟಡ: ಪುರಸಭೆ ಆಡಳಿತ ಪಕ್ಷದ ಸದಸ್ಯೆಯಿಂದ ದೂರು

KannadaprabhaNewsNetwork | Published : Dec 18, 2023 2:00 AM

ಸಾರಾಂಶ

ಹಾನಗಲ್ಲ ಪುರಸಭೆ ಆಡಳಿತ ಪಕ್ಷದ ಸದಸ್ಯೆ ವೀಣಾ ಗುಡಿ ಪುರಸಭೆ ಮುಖ್ಯಾಧಿಕಾರಿಗೆ ದೂರೊಂದನ್ನು ನೀಡಿ ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ಪುರಸಭೆ ಪರವಾನಿಗೆ ಇಲ್ಲದೆ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಮೂಲಭೂತ ಸೌಲಭ್ಯಗಳಿಲ್ಲದೆ ವಾರ್ಡ್‌ನಲ್ಲಿ ಸಾರ್ವಜನಿಕರು ಆಡಳಿತದ ವಿರುದ್ಧ ಮಾತನಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗಳ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಪುರಸಭೆಯ ಆಸ್ತಿಯನ್ನೇ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಹಾನಗಲ್ಲ

ಆಕ್ರಮ ಕಟ್ಟಡಗಳು ಕಾನೂನು ಬಾಹಿರವಾಗಿ ತಲೆ ಎತ್ತುತ್ತಿದ್ದರೂ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಸಬೂಬು ಹೇಳಿ ಕಾಲ ಕಳೆಯುತ್ತಿದ್ದಾರೆ ಎಂದು ಆಡಳಿತ ಪಕ್ಷದ ಪುರಸಭೆ ಸದಸ್ಯರೇ ದೂರು ಸಲ್ಲಿಸಿ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಹಾನಗಲ್ಲ ಪುರಸಭೆ ಆಡಳಿತ ಪಕ್ಷದ ಸದಸ್ಯೆ ವೀಣಾ ಗುಡಿ ಪುರಸಭೆ ಮುಖ್ಯಾಧಿಕಾರಿಗೆ ದೂರೊಂದನ್ನು ನೀಡಿ ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ಪುರಸಭೆ ಪರವಾನಿಗೆ ಇಲ್ಲದೆ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಮೂಲಭೂತ ಸೌಲಭ್ಯಗಳಿಲ್ಲದೆ ವಾರ್ಡ್‌ನಲ್ಲಿ ಸಾರ್ವಜನಿಕರು ಆಡಳಿತದ ವಿರುದ್ಧ ಮಾತನಾಡುತ್ತಿದ್ದಾರೆ. ಈ ಬಗ್ಗೆ ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿಗಳ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಪುರಸಭೆಯ ಆಸ್ತಿಯನ್ನೇ ಕಳೆದುಕೊಳ್ಳುವ ಸ್ಥಿತಿ ಬಂದಿದೆ ಎಂದು ದೂರಿದ್ದಾರೆ.

ಪಟ್ಟಣದಲ್ಲಿ ಪುರಸಭೆ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಶಾಸಕರು, ಪುರಸಭೆ ಸದಸ್ಯರಿಗೂ ಮುಜುಗರ ಉಂಟಾಗುತ್ತಿದೆ. ಜನಪ್ರತಿನಿಧಿಗಳು ಜನರ ಬಾಯಿಗೆ ತುತ್ತಾಗುವಂತಾಗಿದೆ. ಪುರಸಭೆ ಆಡಳಿತಕ್ಕೂ ಕೂಡ ಜನ ಬೇಸರಿಂದ ಮಾತನಾಡುತ್ತಿದ್ದಾರೆ. ಇದು ತಮಗೆ ಸಂಬಂಧವೇ ಇಲ್ಲ ಎನ್ನುವಂತೆ ಪುರಸಭೆ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಪುರಸಭೆಯ ರಸ್ತೆ ಚರಂಡಿಗಳು ಹಾಳಾಗಿವೆ. ಸ್ವಚ್ಛತೆಯ ವಿಷಯದಲ್ಲಿಯೂ ಪುರಸಭೆ ಕಾಳಜಿ ಇಲ್ಲ. ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪುರಸಭೆ ವಿಫಲವಾಗಿದೆ. ಸಮಸ್ಯೆಗೆ ಸ್ಪಂದಿಸದಿದ್ದರೆ ಪಟ್ಟಣದ ನಾಗರಿಕರನ್ನು ಒಳಗೊಂಡು ವಾರ್ಡ್ ಸದಸ್ಯರು ಧರಣಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಪಟ್ಟಣದಲ್ಲಿ ಆಕ್ರಮ ಕಟ್ಟಡಗಳು ತಲೆ ಎತ್ತುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಗಮನ ಹರಿಸಲಾಗಿದೆ. ಅಕ್ರಮ ಕಟ್ಟಡಗಳ ಪಟ್ಟಿ ಮಾಡಲಾಗಿದೆ. ಸರ್ವೇಗೆ ಕೂಡ ಮಾಹಿತಿ ನೀಡಲಾಗಿದೆ. ಇನ್ನೊಂದು ವಾರದಲ್ಲಿ ವರದಿ ಸಿಗಲಿದೆ. ಹಾಲಿ 20 ಅನಧಿಕೃತ ಕಟ್ಟಡಗಳು ಕಂಡು ಬಂದಿವೆ. ಇನ್ನೂ ಇಂತಹ 20 ಪ್ರಕರಣಗಳು ಸಿಗಬಹುದು. ಕೆಲವು ಸ್ಕೀಂನಲ್ಲಿ ಮಂಜೂರಾದ ಮನೆಗಳಿಗೆ ಹಾನಗಲ್ಲ ಪುರಸಭೆಯಿಂದ ಪರವಾನಿಗೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಅವಕ್ಕೆ ಅಧಿಕೃತ ಪರವಾನಿಗೆ ಅನುದಾನ ಮಂಜೂರಾಗುವಾಗಲೇ ಮೇಲಾಧಿಕಾರಿಗಳಿಂದಲೇ ಬಂದಿರುತ್ತದೆ. ಆಕ್ರಮ ಕಟ್ಟಡ ಹಾಗೂ ಸ್ವಚ್ಛತೆಯ ವಿಷಯದಲ್ಲಿ ಶೀಘ್ರ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Share this article