ಅಕ್ರಮ ಕಟ್ಟಡ ನಿರ್ಮಾಣ, ಎರಡು ಕೋಮುಗಳ ನಡುವೆ ಘರ್ಷಣೆ

KannadaprabhaNewsNetwork |  
Published : Jul 22, 2024, 01:18 AM IST
ಪೊಟೋ-ಪಟ್ಟಣದ ಭರಮಪ್ಪನ ವೃತ್ತದಲ್ಲಿ ಜಾಗೆಯಲ್ಲಿ ಹಿಂದೂಪರ ಸಂಘಟನೆಗಳು ನೂತನ ಕಟ್ಟೆ ಕಟ್ಟುವ ಕಾರ್ಯದಲ್ಲಿ ನಿರತರಾಗಿದ್ದಾಗ ಪೊಲೀಸ್ ಅಧಿಕಾರಿಗಳು ತಡೆ ಹಿಡಿಯುತ್ತಿರುವುದು.  | Kannada Prabha

ಸಾರಾಂಶ

ಹಿಂದೂ ಪರ ಸಂಘಟನೆ ಯುವಕರು ಅಂಜುಮನ್ ಇಸ್ಲಾಂ ಸಂಸ್ಥೆಯ ಅಕ್ರಮ ಕಟ್ಟಡ ತೆರವುಗೊಳಿಸಿ ನಮಗೆ ನ್ಯಾಯ ಒದಗಿಸಿಕೊಡುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆಗ್ರಹಿಸಿದರು

ಲಕ್ಷ್ಮೇಶ್ವರ: ಪಟ್ಟಣದ ಭರಮಪ್ಪನ ಸರ್ಕಲ್ ಹತ್ತಿರ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಅಕ್ರಮ ಕಟ್ಟಡ ನಿರ್ಮಾಣ ವಿರೋಧಿಸಿ ಹಿಂದೂ ಪರ ಸಂಘಟನೆಗಳ ಯುವಕರು ಭರಮಪ್ಪನ ಸರ್ಕಲ್ ಮುಂದೆ ಕಟ್ಟೆ ಕಟ್ಟಲು ಮುಂದಾದಾಗ ಅಧಿಕಾರಿಗಳು ತಡೆದ ಘಟನೆ ಭಾನುವಾರ ಮುಂಜಾನೆ ನಡೆಯಿತು.

ಅಂಜುಮನ್‌ ಸಂಸ್ಥೆಯ ಕಟ್ಟಡ ನಿರ್ಮಾಣ ವಿರೋಧಿಸಿ ಹಿಂದೂ ಪರ ಸಂಘಟನೆಗಳು ಭರಮಪ್ಪನ ಸರ್ಕಲ್‌ ಮುಂದೆ ಕಟ್ಟೆ ಕಟ್ಟಲು ಯತ್ನಿಸಿದಾಗ, ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಅಡ್ಡಿ ಪಡಿಸಿದರು. ಆಗ ಹಿಂದೂ ಪರ ಸಂಘಟನೆ ಯುವಕರು ಅಂಜುಮನ್ ಇಸ್ಲಾಂ ಸಂಸ್ಥೆಯ ಅಕ್ರಮ ಕಟ್ಟಡ ತೆರವುಗೊಳಿಸಿ ನಮಗೆ ನ್ಯಾಯ ಒದಗಿಸಿಕೊಡುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಆಗ್ರಹಿಸಿದರು.

ಘಟನೆ ವಿವರ: ಪಟ್ಟಣದ ಬಜಾರ್ ರಸ್ತೆಯ ಮೂಲಕ ದೂದಪೀರಾ ದರ್ಗಾಕ್ಕೆ ಸಾಗುವ ಮಾರ್ಗದಲ್ಲಿರುವ ಪುರಾತನ ಭರಮಪ್ಪನ ವೃತ್ತದಲ್ಲಿನ ಕಟ್ಟೆಯನ್ನು ಕಳೆದ ಹಲವು ವರ್ಷಗಳಿಂದ ಹಿಂದೂ ಧರ್ಮಿಯರು ಪೂಜಿಸುತ್ತಾ ಬರುತ್ತಿದ್ದು. ಅದೇ ವೃತ್ತದಲ್ಲಿರುವ ಉರ್ದು ಮಾಧ್ಯಮ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೊಂದಿಕೊಂಡಂತೆ ಇರುವ ಜಾಗೆಯಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಕೆಲ ಅಂಗಡಿ ನಿರ್ಮಾಣ ಮಾಡಿಕೊಂಡಿದ್ದರು. ಅಂಜುಮನ್ ಸಂಸ್ಥೆಯ ಕಟ್ಟಡ ಹಳೆಯದಾಗಿದ್ದು, ಅದನ್ನು ತೆರವುಗೊಳಿಸಿ ಅಲ್ಲಿ ಹೊಸ ಅಂಗಡಿ ಕಟ್ಟುವ ಸಲುವಾಗಿ ಶನಿವಾರ ರಾತ್ರಿ ಹಳೆಯ ಅಂಗಡಿಗಳ ಮೇಲೆ ತರಾತುರಿಯಲ್ಲಿ ತಗಡಿನ ಮೇಲ್ಚಾವಣೆ ಹಾಕುತ್ತಿರುವುದನ್ನು ಗಮನಿಸಿದ ಹಿಂದೂಪರ ಸಂಘಟನೆಯ ಯುವಕರು ಭಾನುವಾರ ಬೆಳಗ್ಗೆ ಭರಮಪ್ಪನ ವೃತ್ತದಲ್ಲಿ ಹೊಸ ಕಟ್ಟೆ ಕಟ್ಟುವ ಕಾರ್ಯದಲ್ಲಿ ತೊಡಗಿದರು.

ಈ ವಿಷಯ ಅರಿತ ಪುರಸಭೆ ಹಾಗೂ ಪೊಲೀಸ್ ಅಧಿಕಾರಿಗಳು ಈ ಜಾಗೆಯಲ್ಲಿ ನೂತನ ಕಟ್ಟಡ ಕಟ್ಟದಂತೆ ತಡೆ ಹಿಡಿದಾಗ ಪೊಲೀಸರು ಹಾಗೂ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು.

ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಸ್ಥಳಕ್ಕೆ ಆಗಮಿಸಿ ಹಿಂದೂ ಪರ ಸಂಘಟನೆಯ ಯುವಕರೊಂದಿಗೆ ಮಾತನಾಡಿ, ಅಂಜುಮನ್ ಎ ಇಸ್ಲಾಂ ಸಂಸ್ಥೆ ಕಟ್ಟುತ್ತಿರುವ ಕಟ್ಟಡ ಕಾಮಗಾರಿ ತಡೆ ಹಿಡಿಯುವಂತೆ ನಿರ್ದೇಶನ ನೀಡುವುದಲ್ಲದೆ 15 ದಿನಗಳೊಳಗೆ ಜಾಗೆ ಅಂಜುಮನ್ ಸಂಸ್ಥೆಗೆ ಸೇರಿದ್ದರ ಬಗ್ಗೆ ದಾಖಲೆ ತಂದು ಕೊಡಬೇಕು ಇಲ್ಲದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದಾಗ ಹಿಂದೂಪರ ಸಂಘಟನೆಯ ಯುವಕರು ಒಪ್ಪಿಕೊಂಡು ಅಲ್ಲಿಂದ ತೆರಳಿದರು.

ಘಟನೆಯ ಮಾಹಿತಿ ಅರಿತ ಡಿವೈಎಸ್ಪಿ ಇನಾಂದಾರ ಸ್ಥಳಕ್ಕೆ ಆಗಮಿಸಿ ಶಾಂತಿ ಸುವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ವೇಳೆ ಪಿಎಸ್‌ಐ ಈರಣ್ಣ ರಿತ್ತಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ