- ಎಸ್‌ಪಿ ಸೂಚನೆ ಮೇರೆಗೆ ದಾಳಿ । 2 ಸಾವಿರ ಕೆಜಿ ಪಟಾಕಿಗಳ ವಶ - - - ಕನ್ನಡಪ್ರಭ ವಾರ್ತೆ, ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಸೂಚನೆ ಮೇರೆಗೆ ಬುಧವಾರ ಪಟಾಕಿ ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಮೇಲೆ ನಡೆದ ದಾಳಿ ವೇಳೆ ಸಾವಿರ ಕೆ.ಜಿ. ತೂಕದ ಪಟಾಕಿ ವಶಪಡಿಸಿಕೊಳ್ಳಲಾಗಿದ್ದು, 4 ಪ್ರಕರಣಗಳನ್ನು ದಾಖಲಿಸಲಾಗಿದೆ. ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ಬಳಿಕ ಸರ್ಕಾರ ರಾಜ್ಯದಲ್ಲಿ ಹಬ್ಬ, ಮದುವೆ, ರಾಜಕೀಯ ಕಾರ್ಯಕ್ರಮದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಿದೆ. ಈ ಹಿನ್ನೆಲೆ ಅಧಿಕಾರಿಗಳ ಪ್ರತ್ಯೇಕ ತಂಡಗಳು ಪಟಾಕಿಗಳನ್ನು ಮಾರಾಟ ಮಾಡುವ ಮಳಿಗೆ ಮತ್ತು ಗೋದಾಮುಗಳ ಮೇಲೆ ದಾಳಿ ನಡೆಸಿದೆ. ನಿಯಮ ಉಲ್ಲಂಘನೆ ಮಾಡಿ, ಪಟಾಕಿಗಳನ್ನು ಸಂಗ್ರಹಿಸಿದ್ದ ಮತ್ತು ಮಾರಾಟ ಮಾಡುತ್ತಿದ್ದ ಮಳಿಗೆ, ಗೋದಾಮು ಮಾಲೀಕರ ವಿರುದ್ಧ ಭದ್ರಾವತಿ ಹೊಸಮನೆ ಪೊಲೀಸ್ ಠಾಣೆ, ಹೊಳೆಹೊನ್ನೂರು ಪೊಲೀಸ್ ಠಾಣೆ, ವಿನೋಬನಗರ ಪೊಲೀಸ್ ಠಾಣೆ ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ. ದಾಳಿಯಲ್ಲಿ ಶಿವಮೊಗ್ಗ-ಎ ಉಪ ವಿಭಾಗದಲ್ಲಿ ಡಿವೈಎಸ್ಪಿ ಬಾಲರಾಜ್, ಶಿವಮೊಗ್ಗ-ಬಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಎಂ.ಸುರೇಶ್, ಭದ್ರಾವತಿ ಉಪ ವಿಭಾಗದಲ್ಲಿ ಡಿವೈಎಸ್ಪಿ ನಾಗರಾಜ್, ಸಾಗರ ಉಪ ವಿಭಾಗದಲ್ಲಿ ಡಿವೈಎಸ್ಪಿ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್, ಶಿಕಾರಿಪುರ ಉಪ ವಿಭಾಗದಲ್ಲಿ ಡಿವೈಎಸ್ಪಿ ಶಿವಾನಂದ್ ಮದರಖಂಡಿ ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಹಾಗೂ ಆಯಾ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಹಾಗೂ ಕಂದಾಯ, ಲೋಕೋಪಯೋಗಿ, ಅಗ್ನಿಶಾಮಕ, ಮೆಸ್ಕಾಂ, ಮಹಾನಗರ ಪಾಲಿಕೆ, ನಗರ ಪಾಲಿಕೆ, ತಾಲೂಕು ಪಂಚಾಯತಿಯ ಅಧಿಕಾರಿಗಳನ್ನೊಳಗೊಂಡ ಪ್ರತ್ಯೇಕ ತಂಡಗಳು ಜಿಲ್ಲೆಯಾದ್ಯಂತ ಒಟ್ಟು 63 ಪಟಾಕಿ ಮಳಿಗೆ ಮತ್ತು ಗೋದಾಮುಗಳಲ್ಲಿ ಪಟಾಕಿ ಸಂಗ್ರಹ ಮತ್ತು ಮಾರಾಟಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಮತ್ತು ಪರವಾನಿಗೆ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿದರು. - - - -11ಎಸ್ಎಂಜಿಕೆಪಿ07: ಶಿವಮೊಗ್ಗ-ಎ ಉಪ ವಿಭಾಗದಲ್ಲಿ ಡಿವೈಎಸ್ಪಿ ಬಾಲರಾಜ್ ನೇತೃತ್ವದ ತಂಡ ಪಟಾಕಿ ಗೋದಾಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.