ಮೂಡುಬಿದಿರೆ: ಇಲ್ಲಿನ ಪೊಲೀಸರು ತೋಡಾರು ಬಳಿ ನಡೆಸಿದ ಕಾರ್‍ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ, ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಘಟನೆ ವಿವರ: ಮೂಡುಬಿದಿರೆ ಪೊಲೀಸ್ ಠಾಣೆ ಎಸ್ ಐ ಪ್ರತಿಭಾ ಕೆ.ಸಿ. ಅವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಯಿತು. ಈ ಹಿನ್ನೆಲೆಯಲ್ಲಿ ತೋಡಾರು ಗ್ರಾಮದ ದ್ವಾರದ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಆ ಸಮಯದಲ್ಲಿ ಗರಡಿ ಕಡೆಯಿಂದ ಬಂದ ವ್ಯಾಗನರ್ ಕಾರು ಮತ್ತು ಅದರ ಹಿಂದೆಯೇ ಬಂದ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಸೂಚಿಸಲಾಯಿತು. ಆದರೆ ವಾಹನ ಸವಾರರು ಸೂಚನೆ ಲೆಕ್ಕಿಸದೆ ಮುಂದೆ ಚಲಾಯಿಸಿದರು.ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಅಡ್ಡಗಟ್ಟಿದರು. ಪಿಕಪ್ ವಾಹನದ ಚಾಲಕ ಹರ್ಷದ್ ಮತ್ತು ಇತರರು ವಾಹನದಿಂದಿಳಿದು ಪರಾರಿಯಾದರು. ಪಿಕಪ್ ವಾಹನಕ್ಕೆ ಬೆಂಗಾವಲಾಗಿ ಬಂದಿದ್ದ ವ್ಯಾಗನರ್ ಕಾರಿನ ಚಾಲಕ ಸಫರ್ ಮತ್ತು ಹಂಡೇಲು ನಿವಾಸಿ ಅಬೂಬಕರ್ ಕೂಡ ಪರಾರಿಯಾದರು. ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಎರಡು ಹಸುಗಳು, ಎರಡು ಗಂಡು ದನಗಳು ಹಾಗೂ ನಾಲ್ಕು ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಕಾಲು ಹಾಗೂ ತಲೆಯನ್ನು ಹಗ್ಗದಿಂದ ಕಟ್ಟಿ ತುಂಬಿರುವುದು ಪತ್ತೆಯಾಯಿತು.ಪೊಲೀಸರು ವಾಹನಗಳು ಹಾಗೂ ಎಂಟು ಜಾನುವಾರುಗಳನ್ನು ರಕ್ಷಿಸಿ ಮುಂದಿನ ಕ್ರಮಕ್ಕಾಗಿ ವಶಕ್ಕೆ ಪಡೆದರು. ಆರೋಪಿಗಳು ಕಳ್ಳತನದ ಜಾನುವಾರುಗಳನ್ನು ಅಬೂಬಕರ್ ಎಂಬವರ ಮನೆಗೆ ಸಾಗಿಸಿ, ಅಲ್ಲಿ ವಧೆ ಮಾಡಿ ಮಾಂಸ ಮಾರಾಟ ಮಾಡುವ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.