ಪುತ್ತೂರು : ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಬೆನ್ನಟ್ಟಿದ ಪೊಲೀಸರು ಪರಾರಿಯಾಗುತ್ತಿದ್ದ ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ನಸುಕಿನ ಜಾವ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಗ್ರಾಮದ ಬೆಳ್ಳಿಚಡವು ಎಂಬಲ್ಲಿ ನಡೆದಿದೆ. ಲಾರಿಯಲ್ಲಿ 12 ಜಾನುವಾರುಗಳನ್ನು ಸಾಗಿಸಲಾಗುತ್ತಿತ್ತು.ಆರೋಪಿ ಲಾರಿ ಚಾಲಕ ಅಬ್ದುಲ್ಲಾ (೪೦) ಎಂಬಾತನ ಕಾಲಿಗೆ ಪೊಲೀಸರು ಗುಂಡೇಟು ಹಾಕಿದ್ದಾರೆ. ಇನ್ನೋರ್ವ ಆರೋಪಿ ಪರಾರಿಯಾಗಿದ್ದಾರೆ, ಸಾಗಾಟದ ವೇಳೆ ಒಂದು ಜಾನುವಾರು ಸತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಚರ್ ಲಾರಿಯಲ್ಲಿ ಸುಮಾರು 10 ಜಾನುವಾರುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಾಟ ಮಾಡುತ್ತಿತ್ತು ಎನ್ನಲಾಗಿದ್ದು, ಖಚಿತ ವರ್ತಮಾನದ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಲಾರಿ ಆಗಮಿಸುವುದನ್ನು ಗಮನಿಸಿ ವಾಹನ ನಿಲ್ಲಿಸಲು ಸೂಚಿಸಿದಾಗ ಚಾಲಕ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ. ಸುಮಾರು ೧೦ ಕಿ.ಮೀ. ದೂರ ವಾಹನವನ್ನು ಬೆನ್ನಟ್ಟಿದರು, ಆರೋಪಿಯು ಪೊಲೀಸ್ ಜೀಪಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿರುತ್ತಾನೆ. ಆಗ ಪಿಎಸ್‌ಐ ಎರಡು ಸುತ್ತು ಫೈಯರ್ ಮಾಡಿದ್ದಾರೆ. ಒಂದು ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿರುತ್ತದೆ. ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿ ಯಾಗಿದ್ದಾನೆ. ಆರೋಪಿ ಅಬ್ದುಲ್ಲ ಮೂಲತಃ ಕೇರಳದ ಕಾಸರಗೋಡಿನವನು. ಆರೋಪಿಯನ್ನು ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋ ಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವುಗಳ ರಕ್ಷಿಸಿದ ಪುತ್ತಿಲ ಬಳಗ: ಅಕ್ರಮ ಗೋಸಾಗಟ ನಡೆಸುತ್ತಿದ್ದ ಗೋಹಂತಕರಿಗೆ ಗೋಪೂಜೆಯಂದೇ ಪುತ್ತೂರು ಪೊಲೀಸರು ಗುಂಡೇಟು ನೀಡಿದ್ದು, ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಗಳು ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಗುಂಡೇಟು ನಡೆದ ಈಶ್ವರಮಂಗಲದ ಬೆಳ್ಳಿಚಡವು ಸ್ಥಳಕ್ಕೆ ಭೇಟಿ ನೀಡಿದ ಅರುಣ್ ಪುತ್ತಿಲ ಲಾರಿಯಲ್ಲಿದ್ದ ಗೋವುಗಳನ್ನು ವೀಕ್ಷಿಸಿ ಗೋಕಳ್ಳಸಾಗಟಗಾರರಿಗೆ ಗುಂಡೇಟು ನೀಡಿದ ದಕ್ಷಿಣ ಕನ್ನಡ ಎಸ್ಪಿ , ಡಿವೈಎಸ್ಪಿ, ಠಾಣಾಧಿಕಾರಿ ಜಂಬುರಾಜ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಪುತ್ತಿಲ ಮತ್ತು ತಂಡದಿಂದ ಲಾರಿಯಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಗೋವುಗಳನ್ನು ಪೊಲೀಸರಿಗೆ ಮನವರಿಕೆ ಮಾಡಿ ಗೋವುಗಳನ್ನು ಹೊರ ತೆಗೆದು ಜೀವ ರಕ್ಷಿಸಲಾಯಿತು.ಹಲವು ವರ್ಷಗಳಿಂದ ಗೋಕಳ್ಳರ ತಂಡ ಗಡಿಭಾಗದಲ್ಲಿ ಕೇರಳಕ್ಕೆ ಅಕ್ರಮ ಗೋಕಳ್ಳಸಾಗಾಟ ನಡೆಸುತ್ತಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಹಲವು ಪ್ರತಿಭಟನೆಗಳು ನಡೆದಿದ್ದವು. ಹಿಂದೂಸಂಘಟನೆಗಳ ಹೋರಾಟಕ್ಕೆ ಇಂದು ದೊಡ್ಡ ಜಯ ಸಿಕ್ಕಂತಾಗಿದೆ. ಗೋಕಳ್ಳಸಾಗಟದ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕೆಂದು ಅರುಣ್ ಪುತ್ತಿಲ ಹೇಳಿದರು.
ಪೊಲೀಸರಿಗೆ ಶಾಸಕ ಅಭಿನಂದನೆ:
ಪೊಲೀಸರು ಶೂಟೌಟ್ ಮಾಡಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕ್ರಮಕ್ಕೆ ಶಾಸಕ ಅಶೋಕ್ ರೈ ಅಭಿನಂದಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿದ ಶಾಸಕರು, ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳಿಗೆ ಪೊಲೀಸರು ಕಡಿವಾಣ ಹಾಕುತ್ತಿದ್ದಾರೆ.ಸಮಾಜದಲ್ಲಿ ಸಂಘರ್ಷಕ್ಕೆ ಕಾರಣವಾಗುವ ಗೋಸಾಗಾಟ ಪ್ರಕರಣಕ್ಕೆ ಪೊಲೀಸರು ಅಲ್ಲಲ್ಲಿ ಬ್ರೇಕ್ ಹಾಕುತ್ತಿದ್ದಾರೆ. ಮುಂದೆ ಅಕ್ರಮ ಚಟುವಟಿಕೆ ಮಾಡುವ ಎಲ್ಲರಿಗೂ ಪಾಠವಾಗಬೇಕು ಎಂದು ಹೇಳಿದರು.
ಸಮುದಾಯಕ್ಕೆ ಕೆಟ್ಟ ಹೆಸರು ಸಲ್ಲದು :
ಇಲ್ಲಿಯವರು ಈ ಕೃತ್ಯ ಮಾಡಿಲ್ಲ. ಕೇರಳದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಒಂದಿಬ್ಬರು ವ್ಯಕ್ತಿಗಳು ಮಾಡುವ ತಪ್ಪಿಗೆ ಇಡೀ ಸಮುದಾಯದಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಪುತ್ತಿಲರಿಗೆ ಟಾಂಗ್ : ಈ ವಿಚಾರದಲ್ಲಿ ‘ಪೋಸು ಕೊಡುವುದು ಬೇಡ’ ಎಂದು ಅರುಣ್ ಕುಮಾರ್ ಪುತ್ತಿಲ ಅವರಿಗೆ ಪರೋಕ್ಷವಾಗಿ ಸೂಚಿಸಿದ ಶಾಸಕರು, ಸ್ಥಳಕ್ಕೆ ಬಂದು ಗೋರಕ್ಷಣೆ ಹೆಸರಲ್ಲಿ ಫೊಟೋ ಪೋಸ್ ಕೊಡುವುದು ಬೇಡ. ಕೆಲವರು ಬಂದು ಫೋಸ್ ಕೊಟ್ಟಿದ್ದ ವಿಚಾರ ಗಮನಕ್ಕೆ ಬಂದಿದೆ. ಅಕ್ರಮ ಗೋ ಸಾಗಾಟದಾರನ ಮೇಲೆ ಶೂಟೌಟ್ ಮಾಡಿರುವುದು ಮತ್ತು ಅವುಗಳ ರಕ್ಷಣೆ ಮಾಡಿರುವುದು ಕಾಂಗ್ರೆಸ್ ಸರ್ಕಾರ ಎಂಬುದನ್ನು ಫೋಸ್ ಕೊಡುವವರು ತಿಳಿದುಕೊಳ್ಳಬೇಕು. ಗೋವುಗಳ ರಕ್ಷಣೆ ಮಾಡಲು ಕಾಂಗ್ರೆಸ್ ಸರಕಾರದಿಂದ ಮಾತ್ರ ಸಾಧ್ಯ ಎಂದು ಹೇಳಿದ್ದಾರೆ.
ಜಾನುವಾರುಗಳ ಸಾವು ತಪ್ಪಿಸಲು ಸ್ಥಳೀಯರ ಸಹಕಾರ: ಎಸ್‌ಪಿ
ಜಾನುವಾರುಗಳ ಸಾಗಾಣಿಕೆ ಪ್ರಕರಣದ ವೇಳೆ ಒಟ್ಟು 12 ಜಾನುವಾರುಗಳಲ್ಲಿ ಒಂದು ಜಾನುವಾರು ಸತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ದೊಡ್ಡ ಕತ್ತಿ ಒಂದರಿಂದ ಲಾರಿಯ ಹಗ್ಗ ತುಂಡರಿಸುವ ವೀಡಿಯೋ ವೈರಲ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸರು, ಅರುಣ್ ಕುಮಾರ್ ಪುತ್ತಿಲ ಅವರು ಈ ವಿಷಯವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಎತ್ತುಗಳನ್ನು ವಾಹನದಿಂದ ಇಳಿಸಲು ಅನುಮತಿ ಕೋರಿದ್ದಾರೆ.
ಜಾನುವಾರಗಳ ಇನ್ನಷ್ಟು ಸಾವು ತಪ್ಪಿಸಲು ನಾವು ಸ್ಥಳೀಯರ ಸಹಕಾರ ಪಡೆದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.ಅರುಣ್ ಕುಮಾರ್ ಪುತ್ತಿಲ ಅವರ ಕೈಯಲ್ಲಿದ್ದ ಕತ್ತಿ ಸಮೀಪದ ಮನೆಯೊಂದರಿಂದ ತರಲಾಗಿದ್ದು, ಅದು ಘಟನೆ ನಡೆದ ಸ್ಥಳದ ಎದುರಿನ ಮುಸ್ಲಿಂ ಕುಟುಂಬದ ಮನೆಯಿಂದ ನೀಡಲಾಗಿದ್ದಾಗಿದೆ. ಎತ್ತುಗಳನ್ನು ಬಿಗಿಯಾಗಿ ಕಟ್ಟಿ ಹಾಕಿದ್ದ ಹಗ್ಗಗಳನ್ನು ಕತ್ತರಿಸಿ ರಕ್ಷಿಸಲು ಅದು ಬಳಸಲ್ಪಟ್ಟಿದೆ.
ಈ ಪ್ರಕರಣದಲ್ಲಿ ಯಾವುದೇ ಸಂಸ್ಥೆ ಅಥವಾ ಸಂಘಟನೆಗಳು ಧಾರ್ಮಿಕ ಆಧಾರದ ಮೇಲೆ ವಿಷಯವನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡಿದರೆ, ಸಾರ್ವಜನಿಕರು ಅವರ ಉದ್ದೇಶಗಳನ್ನು ಪ್ರಶ್ನಿಸಬೇಕು ಹಾಗೂ ಇಂತಹ ಪ್ರಚಾರಗಳಿಗೆ ಬೆಂಬಲ ನೀಡಬಾರದು ಎಂದು ಪೊಲೀಸರು ಜನರಿಗೆ ವಿನಂತಿಸಿದ್ದಾರೆ.ಪೊಲೀಸರು ತಪ್ಪು ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿರುವುದಾಗಿ ತಿಳಿಸಿದ್ದಾರೆ.