ಅಕ್ರಮ ಗೋಸಾಗಾಟ, ಅನಧಿಕೃತ ಕಸಾಯಿಖಾನೆ ತೆರವುಗೊಳಿಸಿ

KannadaprabhaNewsNetwork |  
Published : May 22, 2026, 02:00 AM IST
ಹುಬ್ಬಳ್ಳಿಯಲ್ಲಿ ಅನಧಿಕೃತ ಕಸಾಯಿಖಾನೆ, ಜಾನುವಾರುಗಳ ಕಳ್ಳ ಸಾಗಾಣಿಕೆ ತಡೆಗೆ ಒತ್ತಾಯಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯಿಂದ ಪ್ರತಿಭಟನೆ ನಡೆಸಿ ಹು-ಧಾ ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌ಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಹುಬ್ಬಳ್ಳಿಯ ಹಲವೆಡೆ ಅನಧಿಕೃತ ಕಸಾಯಿಖಾನೆಗಳಿದ್ದು, ಬಹಿರಂಗವಾಗಿಯೇ ಗೋ ಮಾಂಸ ಮಾರಾಟ ಮಾಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಹುಬ್ಬಳ್ಳಿ:

ಬಕ್ರೀದ್‌ ಹಬ್ಬದ ಹಿನ್ನೆಲೆ ನಗರದಲ್ಲಿ ಗೋವುಗಳ ಅಕ್ರಮ ಸಾಗಾಟ, ಅನಧಿಕೃತ ಕಸಾಯಿಖಾನೆ, ಜಾನುವಾರುಗಳ ಕಳ್ಳ ಸಾಗಾಣಿಕೆ ತಡೆಯುವಲ್ಲಿ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಗುರುವಾರ ಪಾಲಿಕೆ ಆಯುಕ್ತರ ಕಚೇರಿ ಎದುರು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕಾರ್ಯಕರ್ತರು ಭಜನೆ ಮಾಡುವ ಮೂಲಕ ಪ್ರತಿಭಟಿಸಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಪಾಲಿಕೆಯ ಆಯುಕ್ತರ ಕಚೇರಿಯ ವರೆಗೆ ಮೆರವಣಿಗೆ ಹಮ್ಮಿಕೊಂಡರು. ಮನವಿ ಸ್ವೀಕರಿಸಲು ಪಾಲಿಕೆ ಆರೋಗ್ಯಾಧಿಕಾರಿ ಬಾರದ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿ ಎದುರು ಕುಳಿತು ಭಜನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಜಿಲ್ಲಾ ಸಂಯೋಜಕ ಶ್ರೀಧರ ಕಲಬುರ್ಗಿ ಮಾತನಾಡಿ, ನಗರದಲ್ಲಿ ಹಲವೆಡೆ ಅನಧಿಕೃತ ಕಸಾಯಿಖಾನೆಗಳಿದ್ದು, ಬಹಿರಂಗವಾಗಿಯೇ ಗೋ ಮಾಂಸ ಮಾರಾಟ ಮಾಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಎರಡು ದಿನದೊಳಗೆ ಅನಧಿಕೃತ ಕಸಾಯಿಖಾನೆ ಬಂದ್ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಅಂತಹ ಕಸಾಯಿಖಾನೆಗಳ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಲಿದ್ದೇವೆ. ಮುಂದಾಗುವ ಅನಾಹುತಕ್ಕೆ ಪಾಲಿಕೆ ಹಾಗೂ ಪೊಲೀಸ್ ಇಲಾಖೆಯೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಸಮಿತಿಯ ಸಹ ಸಂಯೋಜಕ ರಘು ಯಲ್ಲಕ್ಕನವರ ಮಾತನಾಡಿ, ಅಕ್ರಮವಾಗಿ ಗೋಸಾಗಣೆ ತಡೆಗೆ ಜಿಲ್ಲೆಯ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ 24X7 ವಿಶೇಷ ತಪಾಸಣೆ ವ್ಯವಸ್ಥೆ ಜಾರಿಗೊಳಿಸಬೇಕು, ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಹು-ಧಾ ಮಹಾನಗರ ಪಾಲಿಕೆ ಕಾರ್ಯಪಾಲಕ ಎಂಜಿನಿಯರ್ ಸಂತೋಷಕುಮಾರ ಯರಂಗಳಿ, ಈ ಕುರಿತು ಪಾಲಿಕೆ ಆಯುಕ್ತರ ತರಲಾಗುವುದು. ಶೀಘ್ರವೇ ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.

ಈ ವೇಳೆ ವಿಶ್ವನಾಥ ಬುದ್ದುರ, ಗಣೇಶ ಲದ್ವಾ, ಮಂಜುನಾಥ ಕಾಟಕರ, ಗುರು ಪಾಟೀಲ, ಬಸು ದುರ್ಗದ, ಬಸವರಾಜ ಗೌಡರ, ಅಣ್ಣಪ್ಪ ದಿವಟಗಿ ಸೇರಿದಂತೆ ಹಲವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧಾರವಾಡ ಮಹಾನಗರ ಪಾಲಿಕೆ ನಾಮಫಲಕ ಅಳವಡಿಕೆ!
ಉಪ್ಪಾರ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲಿ: ಪುರುಷೋತ್ತಮಾನಂದಪುರಿ ಶ್ರೀ