ಅಕ್ರಮ ನಾಡ ಬಂದೂಕು ತಯಾರಿಕೆ ಜಾಲ ಪತ್ತೆ

KannadaprabhaNewsNetwork | Published : Nov 28, 2024 12:34 AM

ಸಾರಾಂಶ

ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗುಬ್ಬಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿ, 4 ಬಂದೂಕುಗಳು ಹಾಗೂ ಬಂದೂಕಿನ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಗುಬ್ಬಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿ, 4 ಬಂದೂಕುಗಳು ಹಾಗೂ ಬಂದೂಕಿನ ಬಿಡಿ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಗುಬ್ಬಿ ತಾಲೂಕಿನ ತಿಪ್ಪೂರು ನಿವಾಸಿಗಳಾದ ನಿವಾಸಿ ಟಿ.ಆರ್. ಮಧುಚಂದ್ರ, ಶಿವಕುಮಾರ್, ಉದ್ದೆಹೊಸಕೆರೆಯ ಮಂಜುನಾಥ, ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿ ಮಾದಾಪುರ ವಾಸಿ ರವೀಶ್, ಚೋಳನಕಟ್ಟೆಯ ತಿಮ್ಮರಾಜು, ಭೀಮಸಂದ್ರದ ಇಮ್ರಾನ್ ಪಾಷಾ, ಎಂಬುವರೇ ಬಂಧಿತ ಆರೋಪಿಗಳು. ಗುಬ್ಬಿ ತಾಲೂಕು ತಿಪ್ಪೂರು ನಿವಾಸಿಗಳಾದ ಮಧುಚಂದ್ರ ಮತ್ತು ಶಿವಕುಮಾರ್ ಎಂಬುವರು ಅಕ್ರಮವಾಗಿ ಯಾವುದೇ ಲೈಸೆನ್ಸ್ ಇಲ್ಲದೆ ನಾಡ ಬಂದೂಕಿಗೆ ಕಾಡು ಪ್ರಾಣಿಗಳ ಬೇಟೆಗೆ ಹೋದಾಗ ದರ್ಶನ್ ಎಂಬುವರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿ ಬಂದೂಕು ಕೆಳಗೆ ಬಿದ್ದು ಗುಂಡು ಹಾರಿದ ಪರಿಣಾಮ ದರ್ಶನ್ ಪತ್ನಿ ಚೈತ್ರಾ ಅವರ ಕಾಲಿಗೆ ಗುಂಡು ಬಿದ್ದು ಗಾಯಗೊಂಡಿದ್ದರು. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಡಿಷನ್ ಎಸ್ಪಿಗಳಾದ ಮರಿಯಪ್ಪ ಮತ್ತು ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ಸಿರಾ ಉಪವಿಭಾಗ ಡಿವೈಎಸ್‌ಪಿ ಶೇಖರ್ ನೇತೃತ್ವದಲ್ಲಿ ಗುಬ್ಬಿ ಸಿಪಿಐ ಗೋಪಿನಾಥ್, ಪಿಎಸ್‌ಐ ಸುನೀಲ್‌ಕುಮಾರ್, ಎಆರ್‌ಎಸ್‌ಐ ಮಂಜುನಾಥ್ ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ವಿಭಾಗದ ನರಸಿಂಹರಾಜು ಹಾಗೂ ದುಶ್ಯಂತ್ ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಸದರಿ ಜಾಲವನ್ನು ಬೇಧಿಸಿ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲವಾಗಿದೆ.ಬಂಧಿತ ಆರೋಪಿಗಳಿಂದ 4 ಬಂದೂಕುಗಳು, ಬಂದೂಕಿನ ಬಿಡಿ ಭಾಗಗಳು ಹಾಗೂ ಸದರಿ ಬಂದೂಕುಗಳನ್ನು ತಯಾರಿಸಲು ಬೇಕಾದ ಉಪಕರಣಗಳು, ಕಚ್ಚಾ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಅವರು ಹೇಳಿದರು.ಈ ಅಕ್ರಮ ನಾಡ ಬಂದೂಕುಗಳನ್ನು ಖರೀದಿ ಮಾಡಿದವರು ಕಾಡುಪ್ರಾಣಿಗಳನ್ನು ಭೇಟೆಯಾಡಲು ಉಪಯೋಗಿಸುತ್ತಿದ್ದರು ಎಂದು ಆರೋಪಿಗಳ ವಿಚಾರಣೆ ಸಂದರ್ಭದಲ್ಲಿ ತಿಳಿದು ಬಂದಿದೆ.ಬಂಧಿತ ಆರೋಪಿಗಳಾದ ತಿಮ್ಮರಾಜು ಮತ್ತು ರವೀಶ್ ತಮ್ಮ ಊರಿನಲ್ಲೇ ಅಕ್ರಮವಾಗಿ ಬಂದೂಕು ತಯಾರಿಸುತ್ತಿದ್ದು, ಅದಕ್ಕೆ ಬೇಕಾದ ಮಿಷನರಿ ಕೆಲಸವನ್ನು, ಲೇತ್ ಮತ್ತು ಡ್ರಿಲ್ಲಿಂಗ್ ಮಿಷಿನ್ ಮೂಲಕ ಮತ್ತೊಬ್ಬ ಆರೋಪಿ ಇಮ್ರಾನ್ ಬಂದೂಕು ತಯಾರಿಕೆಗೆ ಸಹಕರಿಸುತ್ತಿದ್ದನು ಎಂದು ಮಾಹಿತಿ ನೀಡಿದ ಅವರು, ಇನ್ನು ಕೆಲವು ಆರೋಪಿಗಳ ಬಳಿ ಅಕ್ರಮ ನಾಡ ಬಂದೂಕುಗಳು ಇರುವ ಬಗ್ಗೆ ಮಾಹಿತಿ ಇದ್ದು, ಅವುಗಳ ಪತ್ತೆಗಾಗಿ ಶೋಧನಾ ಕಾರ್ಯ ಮುಂದುವರೆಸಿರುವುದಾಗಿ ಹೇಳಿದರು.ಈ ಅಕ್ರಮ ನಾಡ ಬಂದೂಕು ತಯಾರಿಕಾ ಜಾಲವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಎಸ್‌ಪಿ ಅಶೋಕ್ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಅಡಿಷನಲ್ ಎಸ್ಪಿ ವಿ. ಮರಿಯಪ್ಪ, ಸಿರಾ ಡಿವೈಎಸ್ಪಿ ಬಿ.ಕೆ. ಶೇಖರ್ ಮತ್ತಿತರರು ಉಪಸ್ಥಿತರಿದ್ದರು.--------------------------ಅಂತಾರಾಜ್ಯ ಬೈಕ್ ಕಳ್ಳರ ಬಂಧನ....ತುಮಕೂರು: ಜಿಲ್ಲೆ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಖದೀಮರನ್ನು ಪಾವಗಡ ಪೊಲೀಸರು ಬಂಧಿಸಿ, ಸುಮಾರು 42 ಲಕ್ಷ ರು ಬೆಲೆಯ 31 ದ್ವಿಚಕ್ರ ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಆಂಧ್ರದ ಪೆನಗೊಂಡ ತಾಲೂಕು ಮಾವತ್ತೂರು ಗ್ರಾಮದ ಹರೀಶ್ ಅಲಿಯಾಸ್ ಕಪ್ಪಲ್, ಮ್ಯಾಕಲಪಲ್ಲಿ ಗ್ರಾಮದ ಮನೋಹರ ಅಲಿಯಾಸ್ ಕವಾಲಿ ಹಾಗೂ ಜಾನಕಂಪಲ್ಲಿ ಗ್ರಾಮದ ಸಾಯಿ ಪವನ್ ಅಲಿಯಾಸ್ ಸಾಯಿ ಎಂಬುವರೇ ಬಂಧಿತ ಆರೋಪಿಗಳು.ಪಾವಗಡ ಪೊಲೀಸ್ ಠಾಣೆಯಲ್ಲಿ ಕಳುವಾಗಿದ್ದ ದ್ವಿಚಕ್ರ ವಾಹನಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪಿಎಸ್‌ಐ ವಿಜಯಕುಮಾರ್ ಮತ್ತು ಸಿಬ್ಬಂದಿಗೆ ರಾಜವಂತಿ ಹೊರವಲಯದ ರಿಲಾಕ್ಸ್ ಬಾರ್ ಸಮೀಪ ಕಳುವಾಗಿದ್ದ ಬೈಕ್ ಆರೋಪಿ ಹರೀಶ್‌ನೊಂದಿಗೆ ಪತ್ತೆಯಾಗಿತ್ತು. ಸದರಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಉಳಿದ ಇಬ್ಬರು ಆರೋಪಿಗಳೊಂದಿಗೆ ಸೇರಿ ಬೈಕ್ ಕಳ್ಳತನ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಬಂಧಿತ ಆರೋಪಿಗಳು ತುಮಕೂರು ಜಿಲ್ಲೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ಆಂಧ್ರದ ಅನಂತಪುರ ಜಿಲ್ಲೆಯ ವಿವಿಧೆಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದದ್ದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಬಂಧಿತರಿಂದ 6 ರಾಯಲ್ ಎನ್‌ಫೀಲ್ಡ್ ಬುಲೆಟ್‌ಗಳು, 7 ಬಜಾಜ್ ಪಲ್ಸರ್, 2 ಅಪ್ಪಾಚಿ, 2 ಆರ್.ಎಕ್ಸ್-100, 2 ಕೆಟಿಎಂ ಡ್ಯೂಕ್, 7 ಹಿರೋ ಸ್ಲೆಂಡರ್, 3 ಪ್ಯಾಷನ್ ಪ್ರೋ, 2 ಹೊಂಡ ಶೈನ್ ಸೇರಿದಂತೆ ಒಟ್ಟು 31 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಅಶೋಕ್ ವಿವರಿಸಿದರು.ಅಡಿಷನಲ್ ಎಸ್ಪಿಗಳಾದ ವಿ. ಮರಿಯಪ್ಪ ಹಾಗೂ ಅಬ್ದುಲ್ ಖಾದರ್ ಮಾರ್ಗದರ್ಶನದಲ್ಲಿ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಪಾವಗಡ ಸಿಪಿಐ ಸುರೇಶ್ ನೇತೃತ್ವದಲ್ಲಿ ಪಿಎಸ್‌ಐಗಳಾದ ವಿಜಯುಮಾರ್, ಗುರುನಾಥ್, ರಾಮಚಂದ್ರಪ್ಪ ಹಾಗೂ ಸಿಬ್ಬಂದಿಗಳಾದ ದೀಪಕ್, ತಳವಾರ್ ರಾಜು, ಜೀವನ್, ಪ್ರವೀಣ್, ಮಾಳಪ್ಪ, ನಟೇಶ್ ಹಾಗೂ ವೈ.ಎನ್. ಹೊಸಕೋಟೆ ಠಾಣೆಯ ಸಿಬ್ಬಂದಿಗಳಾದ ಶ್ರೀಕಾಂತನಾಯ್ಕ್, ಸಂತೋಷ್‌ಕುಮಾರ್ ರವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ ಎಂದರು.

Share this article