ಕನ್ನಡಪ್ರಭ ವಾರ್ತೆ ಮಂಡ್ಯ
ಗುಂಡಾಪುರ ಗ್ರಾಮದ ಸರ್ವೇ ನಂ.೧೦೫/೨ರಲ್ಲಿ ೧ ಎಕರೆ ೩ ಗುಂಟೆ ವಿಸ್ತೀರ್ಣದ ವ್ಯವಸಾಯದ ಜಮೀನನ್ನು ವಸತಿ ಬಡಾವಣೆ ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆಯೇ ಭೂ ಪರಿವರ್ತನೆ ಮಾಡಲಾಗಿದೆ. ವಸತಿ ಬಡಾವಣೆಗೆ ನಿರ್ಮಾಣಕ್ಕೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯುವ ಪರಿಸರ ಸೂಕ್ಷ್ಮವಲಯ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆಯದೆ ಅಂದಿನ ಜಿಲ್ಲಾಧಿಕಾರಿ ಕೆ.ಎನ್.ಗೋಪಾಲಕೃಷ್ಣ ಅವರು ಭೂ ಪರಿವರ್ತನೆಗೆ ಆದೇಶ ನೀಡಿದ್ದರು.
ಇದಲ್ಲದೇ, ಮಂಡ್ಯ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹಾಯಕ ನಿರ್ದೇಶಕರೂ ಕೂಡ ಉದ್ದೇಶಿತ ಸ್ಥಳ ಪರಿಸರ ಸೂಕ್ಷ್ಮವಲಯಕ್ಕೆ ಸೇರಿರುವುದನ್ನು ಪರಿಗಣಿಸದೆ ವಸತಿ ಬಡಾವಣೆ ವಿನ್ಯಾಸ ನಕ್ಷೆಗೆ ಎರಡು ವರ್ಷಗಳ ಹಿಂದೆಯೇ ಅನುಮೋದನೆ ನೀಡಿರುವುದು ದಾಖಲೆಗಳಿಂದ ಬಹಿರಂಗಗೊಂಡಿತ್ತು.ಈ ಸಂಬಂಧ ಹಲಗೂರು ಗ್ರಾಪಂ ಸದಸ್ಯ ಕೆ.ಸುರೇಂದ್ರ ಅವರು ವನ್ಯಜೀವಿ ವಿಭಾಗದ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿದ ಗುಂಡಾಪುರ ಗ್ರಾಮದಲ್ಲಿ ವಸತಿ ಬಡಾವಣೆಗೆ ಭೂ ಪರಿವರ್ತನೆ ಮಾಡಿರುವ ಮಂಜೂರಾತಿಯನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಕೂಡ ಮೈಸೂರಿನ ಪ್ರಾದೇಶಿಕ ಆಯುಕ್ತರು, ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಿ ಭೂ ಪರಿವರ್ತನೆ ಆದೇಶ, ವಿನ್ಯಾಸನಕ್ಷೆ ಅನುಮೋದನೆ ರದ್ದುಗೊಳಿಸುವಂತೆ ದೂರು ನೀಡಿದ್ದರು.
ನ್ಯಾಯಾಲಯದಿಂದ ತಡೆಯಾಜ್ಞೆ ತಂದ ಬಳಿಕ ವಸತಿ ಬಡಾವಣೆಯ ಕೆಲಸವನ್ನು ಚುರುಕುಗೊಳಿಸಿದ್ದು, ಒಳಚರಂಡಿ, ವಿದ್ಯುತ್ ಕಂಬ, ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿದ್ದಾರೆ. ವನ್ಯಜೀವಿ ವಲಯಕ್ಕೆ ಸೇರಿದ ವಸತಿ ಬಡಾವಣೆ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಕೆಲವು ದಿನಗಳ ಹಿಂದೆ ಆನೆಗಳು ಲಗ್ಗೆ ಇಟ್ಟಿವೆ. ಕೆಲವು ತಿಂಗಳುಗಳ ಹಿಂದೆ ಚಿರತೆ ಸೇರಿದಂತೆ ಅನೇಕ ಕಾಡು ಪ್ರಾಣಿಗಳು ಈ ಪ್ರದೇಶದಲ್ಲಿ ಓಡಾಟ ನಡೆಸಿರುವುದನ್ನು ಊರಿನ ಜನರು ಕಂಡಿದ್ದಾರೆ.
ವನ್ಯಜೀವಿಗಳ ಪ್ರದೇಶದಲ್ಲಿ ಜನವಸತಿಗೆ ಅವಕಾಶ ನೀಡಿದರೆ ಮಾನವ-ವನ್ಯಜೀವಿಗಳ ಸಂಘರ್ಷ ಇನ್ನಷ್ಟು ಉಲ್ಬಣಿಸಲಿದೆ. ಈ ಸಾಮಾನ್ಯ ಜ್ಞಾನವಿಲ್ಲದ ಅಧಿಕಾರಿಗಳು ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಬಡಾವಣೆಯನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಪರಿಸರ, ವನ್ಯಜೀವಿ ಪ್ರೇಮಿಗಳು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಕಾವೇರಿ ವನ್ಯಜೀವಿ ವಲಯದಲ್ಲಿ ಅಕ್ರಮವಾಗಿ ನಿರ್ಮಾಣಗೊಳ್ಳುತ್ತಿರುವ ವಸತಿ ಬಡಾವಣೆ ಸ್ಥಳಕ್ಕೆ ನಾಲ್ಕೈದು ದಿನಗಳ ಹಿಂದೆ ಆನೆಗಳು ಬಂದಿದ್ದವು. ಇನ್ನೂ ಹಲವು ಕಾಡು ಪ್ರಾಣಿಗಳು ಇಲ್ಲೇ ಓಡಾಡುತ್ತಿವೆ. ವನ್ಯಜೀವಿ ವಲಯ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ. ಆದರೂ, ವಸತಿ ಬಡಾವಣೆ ಅಭಿವೃದ್ಧಿ ಕಾಮಗಾರಿಗಳನ್ನು ತರಾತುರಿಯಲ್ಲಿ ನಡೆಸುತ್ತಿದ್ದಾರೆ. ಅಪರ ಜಿಲ್ಲಾಧಿಕಾರಿ ತಡೆಯಾಜ್ಞೆ ನೀಡಿದ್ದರೂ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ಆದೇಶಕ್ಕೆ ತಡೆ ತಂದು ಕಾಮಗಾರಿ ನಡೆಸುತ್ತಿದ್ದಾರೆ.