ಜಮೀನು ಅಕ್ರಮ ಖಾತೆಯಿಂದ ಜಾತ್ರೆಗೆ ಕಂಟಕ

KannadaprabhaNewsNetwork |  
Published : Mar 12, 2026, 01:00 AM IST
ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಕಾಡತಿಪ್ಪೂರು, ತಣ್ಣೀರನಹಳ್ಳಿ, ಮುಡ್ಲಕಾಳೇನಹಳ್ಳಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದೊಡ್ಡಬಳ್ಳಾಪುರ: ಇನಾಮ್ತಿ ಜಮೀನು, ಗುಂಡು ತೋಪಿನ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಡಲಾಗಿದ್ದು, ಭೂಗಳ್ಳರು ಹಾಗೂ ಅವರಿಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಡತಿಪ್ಪೂರು, ತಣ್ಣೀರನಹಳ್ಳಿ, ಮುಡ್ಲಕಾಳೇನಹಳ್ಳಿಗಳ ಗ್ರಾಮಸ್ಥರು ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು

ದೊಡ್ಡಬಳ್ಳಾಪುರ: ಇನಾಮ್ತಿ ಜಮೀನು, ಗುಂಡು ತೋಪಿನ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಡಲಾಗಿದ್ದು, ಭೂಗಳ್ಳರು ಹಾಗೂ ಅವರಿಗೆ ಸಹಕರಿಸಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕಾಡತಿಪ್ಪೂರು, ತಣ್ಣೀರನಹಳ್ಳಿ, ಮುಡ್ಲಕಾಳೇನಹಳ್ಳಿಗಳ ಗ್ರಾಮಸ್ಥರು ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಗ್ರಾಮಸ್ಥ ಕೃಷ್ಣಮೂರ್ತಿ ಮಾತನಾಡಿ, ಸಾರ್ವಜನಿಕ ನಕಾಶೆ ರಸ್ತೆಗಳನ್ನು ತೆರವು ಮಾಡುವಲ್ಲಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದು, ಸಮಸ್ಯೆ ಉಲ್ಬಣಗೊಂಡಿದೆ. ಪ್ರತಿ ವರ್ಷ ಏಳು ದಿನಗಳ ಕಾಲ ಅದ್ಧೂರಿಯಾಗಿ ನಡೆಯುವ ಅರಸೇಶ್ವರಿ ದೇವಿಯ ಜಾತ್ರೆಗೆ ರಾಜ್ಯದ ಹಲವು ಭಾಗಗಳಿಂದ ಭಕ್ತರು ಆಗಮಿಸುವುದು ವಾಡಿಕೆ. ಆದರೆ ಈ ದೇವಾಲಯಕ್ಕೆ ಸೇರಿದ ಸರ್ವೇ ನಂಬರ್ 69ರ ಇನಾಮ್ತಿ ಜಮೀನನ್ನು ಗ್ರಾಮಸ್ಥರ ಗಮನಕ್ಕೆ ತರದೇ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದು, ಈ ಬಾರಿಯ ಜಾತ್ರಾಮಹೋತ್ಸವಕ್ಕೆ ಖಾಸಗಿ ವ್ಯಕ್ತಿಗಳು ತೊಂದರೆ ಕೊಡುತ್ತಿದ್ದಾರೆ. ದೇವಾಲಯಕ್ಕೆ ಸೇರಿದ ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಹಿಂಪಡೆದು ದೇವಾಲಯದ ಹೆಸರಿನಲ್ಲಿ ಖಾತೆ ಮಾಡುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾ ಹಾಗೂ ತಾಲೂಕು ಆಡಳಿತ ಅನುವು ಮಾಡಿಕೊಡಬೇಕು ಎಂದರು.

ಅಲ್ಲದೆ, ಸರ್ವೇ ನಂಬರ್ 50ರ ಗುಂಡುತೋಪು ಸ್ಥಳವನ್ನು ಅಕ್ರಮವಾಗಿ ಖಾತೆ ಮಾಡಿದ್ದು ಕೂಡಲೇ ಖಾತೆ ರದ್ದು ಪಡಿಸಬೇಕು. ಸರ್ವೇ ನಂಬರ್ 2 ರಲ್ಲಿ ಪರಿಶಿಷ್ಟ ಪಂಗಡದ ಕುಟುಂಬಗಳು ವಾಸಿಸುತ್ತಿದ್ದು, ಸದರಿ ನಿವಾಸಿಗಳಿಗೆ ಖಾತೆ ಮಾಡಿಕೊಡುವ ಮೂಲಕ ಶಾಶ್ವತ ನಿವೇಶನ ಕಲ್ಪಿಸಬೇಕೆಂದು ಮನವಿ ಮಾಡಿದರು.

ಗ್ರಾಮಸ್ಥ ರಾಜಣ್ಣ ಮಾತನಾಡಿ, ಅರಸೇಶ್ವರಿ ಅಮ್ಮನವರ ಜಾತ್ರೆ ಎಂದರೆ ಅದು ನಮ್ಮ ಹೆಮ್ಮೆ, ನಿರಂತರ ಏಳು ದಿನಗಳ ಕಾಲ ನಡೆಯುವ ಈ ಜಾತ್ರಾಮಹೋತ್ಸವ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ದೇವಾಲಯದ ಜಮೀನು ಖಾಸಗಿದಾರರಿಗೆ ಖಾತೆ ಮಾಡಿಕೊಟ್ಟಿರುವ ಹಿನ್ನೆಲೆ ಸ್ಥಳದ ಅಭಾವದಿಂದ ಜಾತ್ರೆ ಮಾಡಲು ತೊಂದರೆ ಉಂಟಾಗುತ್ತಿದೆ. ತಾಲೂಕು ಆಡಳಿತ ಮಧ್ಯಪ್ರವೇಶಿಸಿ ಜಾತ್ರೆ ನಿರ್ವಘ್ನವಾಗಿ ನಡೆಯುವಂತೆ ಸಹಕರಿಸಬೇಕು ಎಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷೆ ದೇವರಾಜಮ್ಮ ಮಾತನಾಡಿ, ಹಲವು ಬಾರಿ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಹಾಗಾಗಿ ಗ್ರಾಮಸ್ಥರು ಪ್ರತಿಭಟನೆಗೆ ಮುಂದಾಗಿದ್ದೇವೆ. ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಗಂಗರಾಜು, ಶಿವರಾಜು, ರಾಜಣ್ಣ, ಗಂಗಹನುಮಯ್ಯ, ಸಿದ್ದಲಿಂಗಯ್ಯ, ರಾಜಣ್ಣ , ಹರ್ಷ ಮತ್ತಿತರರು ಹಾಜರಿದ್ದರು.

10ಕೆಡಿಬಿಪಿ5-

ದೊಡ್ಡಬಳ್ಳಾಪುರ ತಾಲೂಕು ಕಚೇರಿಗೆ ಕಾಡತಿಪ್ಪೂರು, ತಣ್ಣೀರನಹಳ್ಳಿ, ಮುಡ್ಲಕಾಳೇನಹಳ್ಳಿ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಾರೂಢ ಮಠದ ನಿತ್ಯ ಪ್ರಸಾದಕ್ಕಿಲ್ಲ ಅಡಚಣೆ!
ಮೂಢ ನಂಬಿಕೆಯಿಂದಾಗಿ ಸರ್ಕಾರಿ ಕಟ್ಟಡ ಪಾಳು!